24 ಗಂಟೆಯಲ್ಲೇ ಸರಗಳ್ಳನ ಬಂಧನ: ಮುರುಡೇಶ್ವರ ಪೊಲೀಸರ ಚುರುಕಿನ ಕಾರ್ಯಾಚರಣೆ, ₹3 ಲಕ್ಷ ಮೌಲ್ಯದ ಸ್ವತ್ತು ವಶ

Jul 22, 2026 - 13:21
 0  87
24 ಗಂಟೆಯಲ್ಲೇ ಸರಗಳ್ಳನ ಬಂಧನ: ಮುರುಡೇಶ್ವರ ಪೊಲೀಸರ ಚುರುಕಿನ ಕಾರ್ಯಾಚರಣೆ, ₹3 ಲಕ್ಷ ಮೌಲ್ಯದ ಸ್ವತ್ತು ವಶ

ಆಪ್ತ ನ್ಯೂಸ್ ಭಟ್ಕಳ:

ದಾರಿ ಮಧ್ಯೆ ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಸರಗಳ್ಳತನ ಪ್ರಕರಣವನ್ನು ಮುರುಡೇಶ್ವರ ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿ, ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಆರೋಪಿಯಿಂದ ಬಂಗಾರದ ಸರ, ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮೊಬೈಲ್ ಸೇರಿ ಸುಮಾರು ₹3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಜುಲೈ 20ರಂದು ರಾತ್ರಿ ಭಟ್ಕಳ ತಾಲೂಕಿನ ದೊಡ್ಡ ಬಲಸೆ-ಬೈಲೂರು ನಿವಾಸಿ ಹಾಗೂ ಕಿರಾಣಿ ವ್ಯಾಪಾರಿ ಮಾದೇವ ನಾರಾಯಣ ನಾಯ್ಕ್ ಅವರು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ದೊಡ್ಡಬಲಸೆ ಕ್ರಾಸ್ ಬಳಿ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಅವರನ್ನು ನಿಲ್ಲಿಸಿ, ಕ್ಷಣಾರ್ಧದಲ್ಲಿ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಸಿದು ಪರಾರಿಯಾಗಿದ್ದರು.

ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದರು. ವಿವಿಧ ತಾಂತ್ರಿಕ ಮಾಹಿತಿ, ಸ್ಥಳೀಯ ಸುಳಿವುಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವು ಕೇವಲ 24 ಗಂಟೆಗಳಲ್ಲೇ ಪ್ರಕರಣವನ್ನು ಭೇದಿಸಿದೆ.

ಈ ಕಾರ್ಯಾಚರಣೆಯಲ್ಲಿ ಭಟ್ಕಳ ತಾಲೂಕಿನ ಹಲ್ಲಂದಿ-ಕಟಗಾರಕೊಪ್ಪ ನಿವಾಸಿ ನಾಗರಾಜ ಗಣಪತಿ ಗೊಂಡ (29) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ಸುಲಿಗೆ ಮಾಡಿದ್ದ ಬಂಗಾರದ ಚೈನ್, ಕೃತ್ಯಕ್ಕೆ ಬಳಸಿದ್ದ ಬೈಕ್, ಮೊಬೈಲ್ ಫೋನ್ ಸೇರಿದಂತೆ ಅಂದಾಜು ₹3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮುರುಡೇಶ್ವರ ವೃತ್ತ ನಿರೀಕ್ಷಕ (ಸಿಪಿಐ) ಜಗದೀಶ್ ಹಂಚನಾಳ, ಪೊಲೀಸ್ ಉಪನಿರೀಕ್ಷಕ (ಪಿಎಸ್‌ಐ) ಹಣಮಂತ ಬಿರಾದಾರ ಹಾಗೂ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಮುರುಡೇಶ್ವರ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಭೇದಿಸುವಲ್ಲಿ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಮತ್ತೊಮ್ಮೆ ಸಾಬೀತಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0