ಬನವಾಸಿಯಲ್ಲಿ ದನ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು : ಇಬ್ಬರು ಆರೋಪಿಗಳ ಬಂಧನ – ಕಳ್ಳತನಕ್ಕೆ ಬಳಸಿದ್ದ ₹2 ಲಕ್ಷ ಮೌಲ್ಯದ ವಾಹನ ವಶ

Jul 17, 2026 - 17:43
 0  52
ಬನವಾಸಿಯಲ್ಲಿ ದನ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು : ಇಬ್ಬರು ಆರೋಪಿಗಳ ಬಂಧನ – ಕಳ್ಳತನಕ್ಕೆ ಬಳಸಿದ್ದ ₹2 ಲಕ್ಷ ಮೌಲ್ಯದ ವಾಹನ ವಶ

ಆಪ್ತ ನ್ಯೂಸ್ ಶಿರಸಿ/ಬನವಾಸಿ:

ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ದನ (ಆಕಳು) ಕಳ್ಳತನ ಪ್ರಕರಣವನ್ನು ಬನವಾಸಿ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ್ದ ಸುಮಾರು ₹2 ಲಕ್ಷ ಮೌಲ್ಯದ ಟಾಟಾ ಇಂಟ್ರಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಬನವಾಸಿಯ ಸೊರಬ ರಸ್ತೆಯ ನಿವಾಸಿ ಹಾಗೂ ಕೃಷಿಕ ಮದನ ಮಂಜುನಾಥ ಆರೆರ್ ಅವರಿಗೆ ಸೇರಿದ ಆಕಳನ್ನು ದುಷ್ಕರ್ಮಿಗಳು ಕಳವು ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ 2026ರ ಮೇ 23ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು.

ಸತತ ತನಿಖೆ, ಮಾಹಿತಿ ಸಂಗ್ರಹ ಹಾಗೂ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಬನವಾಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊನ್ನಬಾಗಿ ಗ್ರಾಮದ ಮಹಮ್ಮದ್ ಇಸ್ಮಾಯಿಲ್ ಮಹಮ್ಮದ್ ಅನ್ಸರ್ (20) ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗಿಯ ನಿವಾಸಿ ಹಾಗೂ ಅಡಿಕೆ ವ್ಯಾಪಾರಿ ಮಹಮ್ಮದ್ ತಂದೆ ಮಹಮ್ಮದ್ ಯಾಸಿನ್ (26) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಳ್ಳತನಕ್ಕೆ ಬಳಸಲಾಗಿದ್ದ ಟಾಟಾ ಇಂಟ್ರಾ ವಾಹನವನ್ನು ಜಪ್ತಿ ಮಾಡಿದ್ದಾರೆ. ವಾಹನದ ಮೌಲ್ಯ ಸುಮಾರು ₹2 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಹಾಗೂ ಆರೋಪಿಗಳ ಹಿನ್ನೆಲೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಹಾಗೂ ಸಿಪಿಐ ಸಂಪತ್ ಅವರ ನೇತೃತ್ವದಲ್ಲಿ ಪಿಎಸ್‌ಐ ಮಹಾಂತಪ್ಪ ಕುಂಬಾರ್, ಪಿಎಸ್‌ಐ ರವೀಂದ್ರ ಬಿರಾದಾರ ಹಾಗೂ ಬನವಾಸಿ ಠಾಣೆಯ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಡಿಮೆ ಅವಧಿಯಲ್ಲೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿರುವ ಬನವಾಸಿ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0