ಗೋಕರ್ಣ-ತದಡಿ ರಸ್ತೆ ಮಾರ್ಗದಲ್ಲಿ ಭೂಕುಸಿತ: ಸಂಚಾರ ಅಸ್ತವ್ಯಸ್ತ
ಆಪ್ತ ನ್ಯೂಸ್ ಗೋಕರ್ಣ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ತನ್ನ ಆರ್ಭಟ ಮುಂದುವರಿಸಿದ್ದು, ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಸಾಣೆಕಟ್ಟ–ತದಡಿ ರಸ್ತೆ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ನಿರಂತರ ಮಳೆಯಿಂದ ಗುಡ್ಡದ ದೊಡ್ಡ ಪ್ರಮಾಣದ ಮಣ್ಣು ರಸ್ತೆ ಮೇಲೆ ಕುಸಿದ ಪರಿಣಾಮ ವಾಹನಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಘಟನೆಯ ವೇಳೆ ಯಾವುದೇ ವಾಹನಗಳು ರಸ್ತೆಯಲ್ಲಿ ಸಂಚರಿಸದಿದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆಯೇ ಗೋಕರ್ಣ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಮೇಲಿನ ಮಣ್ಣನ್ನು ತೆರವುಗೊಳಿಸಿ ಸಂಚಾರ ಪುನಃ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದರ ಜೊತೆಗೆ, ಭಾರೀ ಮಳೆಯಿಂದ ಚರಂಡಿ ಹಾಗೂ ರಸ್ತೆ ನೀರು ಒಂದಾಗಿ ಚಿನ್ನದಕೇರಿ ಹಿಂಭಾಗದ ವಸತಿ ಪ್ರದೇಶಗಳಿಗೆ ನುಗ್ಗಿ ಮನೆಗಳಿಗೆ ನೀರು ಪ್ರವೇಶಿಸಿದ್ದು, ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹವಾಮಾನ ಇಲಾಖೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಇನ್ನೂ ಕೆಲವು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಗುಡ್ಡ ಪ್ರದೇಶಗಳು ಹಾಗೂ ನದಿ-ಹಳ್ಳಗಳ ಸಮೀಪ ಸಂಚರಿಸುವವರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



