ಹಾಡುಹಗಲೇ ಶಿಕ್ಷಕಿ ಮನೆಗೆ ಕನ್ನ; ₹4.90 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿ

Aug 12, 2026 - 13:04
 0  312
ಹಾಡುಹಗಲೇ ಶಿಕ್ಷಕಿ ಮನೆಗೆ ಕನ್ನ; ₹4.90 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿ

ಆಪ್ತ ನ್ಯೂಸ್ ಹೊನ್ನಾವರ/ಮಂಕಿ:

ಹಾಡುಹಗಲೇ ಶಿಕ್ಷಕಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಗೋದ್ರೇಜ್‌ ಕಪಾಟಿನ ಲಾಕರ್‌ ಮೀಟಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಕುಳಿಮನೆ ಶಾಂತಿನಗರದಲ್ಲಿ ನಡೆದಿದೆ.

ಆ.11ರಂದು ಬೆಳಗ್ಗೆ 9.45ರಿಂದ ಮಧ್ಯಾಹ್ನ 1 ಗಂಟೆಯೊಳಗಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಶಿಕ್ಷಕಿ ಸಂಧ್ಯಾ ಗುರುದತ್ತ ಶೇಟ್ ಅವರು ಮನೆಯಿಂದ ಹೊರಗಿದ್ದ ಸಂದರ್ಭದಲ್ಲಿ ಕಳ್ಳರು ಮನೆಗೆ ನುಗ್ಗಿದ್ದಾರೆ.

ಮನೆಯಲ್ಲಿದ್ದ ಗೋದ್ರೇಜ್‌ ಕಪಾಟನ್ನು ತೆಗೆದು, ಅದರ ಲಾಕರ್‌ ಅನ್ನು ಕಬ್ಬಿಣದ ಕತ್ತಿಯಿಂದ ಮೀಟಿ ತೆರೆದಿರುವ ಕಳ್ಳರು, ಲಾಕರ್‌ನಲ್ಲಿದ್ದ ಸುಮಾರು ₹4.80 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹10 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿ ಸಂಧ್ಯಾ ಗುರುದತ್ತ ಶೇಟ್ ಅವರು ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳತನವಾಗಿರುವ ಚಿನ್ನಾಭರಣ ಮತ್ತು ನಗದು ಪತ್ತೆಹಚ್ಚಿ, ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಮಂಕಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಕಳ್ಳರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0