ಮುಂಡಗೋಡಿನಲ್ಲಿ ಅಕ್ರಮ ಜಿಂಕೆ ಮಾಂಸ ಜಪ್ತಿ: ಓರ್ವ ಬಂಧನ, ಮತ್ತೋರ್ವ ಪರಾರಿ

Jul 18, 2026 - 19:39
 0  54
ಮುಂಡಗೋಡಿನಲ್ಲಿ ಅಕ್ರಮ ಜಿಂಕೆ ಮಾಂಸ ಜಪ್ತಿ: ಓರ್ವ ಬಂಧನ, ಮತ್ತೋರ್ವ ಪರಾರಿ

ಆಪ್ತ ನ್ಯೂಸ್ ಮುಂಡಗೋಡು:

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ನಂದಿಕಟ್ಟ ಗ್ರಾಮದಲ್ಲಿ ಅಕ್ರಮವಾಗಿ ಜಿಂಕೆ ಮಾಂಸ ಸಂಗ್ರಹಿಸಿ ಇಟ್ಟಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದು, ಸುಮಾರು 9 ಕೆಜಿ ಜಿಂಕೆ ಮಾಂಸವನ್ನು ಜಪ್ತಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಅರಣ್ಯ ಇಲಾಖೆಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಜುಲೈ 17ರಂದು ಮುಂಡಗೋಡು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಈರೇಶ್ ಕಬ್ಬಿನ ಹಾಗೂ ಮುಂಡಗೋಡು ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಂದಿಕಟ್ಟ ಗ್ರಾಮದ ರಮೇಶ್ ಚವ್ವಾಣ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಯಿತು.

ದಾಳಿಯ ವೇಳೆ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 9 ಕೆಜಿ ಜಿಂಕೆ ಮಾಂಸ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಚವ್ವಾಣ್ ಅವರನ್ನು ಬಂಧಿಸಿ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಾಗಿದೆ.

ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ವಸಂತ್ ಕೊರವರ್ (ಮುಂಡಗೋಡು) ಎಂಬಾತ ಪರಾರಿಯಾಗಿದ್ದು, ಆತನ ಪತ್ತೆ ಹಾಗೂ ಬಂಧನಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒಗಳಾದ ಸುನೀತಾ ಬಿ.ಎಂ. ಹಾಗೂ ಮುತ್ತಣ್ಣ ಹುಂದ್ರಾಳ, ಬೀಟ್ ಫಾರೆಸ್ಟರ್‌ಗಳಾದ ಅಮಿತ್ ಸಣ್ಣಕ್ಕಿ, ಹೇಮಾ ಕೂಸನೂರ್, ಮುಸ್ತಾಕ್ ಅಲಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಕರಣದ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಜಿಂಕೆಯ ಬೇಟೆ ಹಾಗೂ ಮಾಂಸ ಸಾಗಣೆ ಜಾಲದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದೆ. ಪರಾರಿಯಾಗಿರುವ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0