ಸರ್ಕಾರಿ ಅಕ್ಕಿ ಅಕ್ರಮ ಸಾಗಾಟ: ತನಿಖೆ ಚುರುಕು, ಬಯಲಿಗೆ ಬರುತ್ತಿದೆ ಹಲವು ಹೆಸರು
ಸಿದ್ದಾಪುರದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ 476 ಚೀಲ ಪಡಿತರ ಅಕ್ಕಿ ಜಪ್ತಿ
ಆಪ್ತ ನ್ಯೂಸ್ ಶಿರಸಿ:
ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಲಾರಿಯನ್ನು ತಡೆದು ಪರಿಶೀಲಿಸಿದ ಅಧಿಕಾರಿಗಳಿಗೆ ಸರ್ಕಾರಿ ಪಡಿತರ ಅಕ್ಕಿಯ ಅಕ್ರಮ ಸಾಗಾಟದ ಜಾಲ ಪತ್ತೆಯಾಗಿದೆ. ಸಿದ್ದಾಪುರದಿಂದ ಮಹಾರಾಷ್ಟ್ರದ ಕೊಲ್ಲಾಪುರದತ್ತ ಸಾಗಿಸಲಾಗುತ್ತಿದ್ದ ಬರೋಬ್ಬರಿ 476 ಚೀಲ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಒಟ್ಟು ₹8,56,460 ಮೌಲ್ಯದ ಅಕ್ಕಿ ಜಪ್ತಿಯಾಗಿದೆ.
ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸಲಾಗುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಆರೋಪಗಳು ಆಗಾಗ್ಗೆ ಕೇಳಿಬರುತ್ತಿವೆ. ಸರ್ಕಾರಿ ಅಕ್ಕಿಯ ಮಾರಾಟ ಹಾಗೂ ಅಕ್ರಮ ಸಾಗಾಟ ಕಾನೂನುಬಾಹಿರ ಎಂಬ ಜಾಗೃತಿ ಮೂಡಿಸುತ್ತಿದ್ದರೂ, ಅಕ್ರಮ ದಂಧೆ ಮುಂದುವರಿದಿರುವುದು ಈ ಪ್ರಕರಣದಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಆಗಸ್ಟ್ 29ರಂದು ಶಿರಸಿ ತಹಶೀಲ್ದಾರ್ ಪುಟ್ಟರಾಜ ಗೌಡ ಅವರ ನೇತೃತ್ವದಲ್ಲಿ ಕಂದಾಯ, ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನೀಲೇಕಣಿ–ಭೀಮನಗುಡ್ಡ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ಸಾಗುತ್ತಿದ್ದ ಅಶೋಕ ಲೈಲ್ಯಾಂಡ್ ಲಾರಿಯನ್ನು ತಡೆದು ಪರಿಶೀಲಿಸಿದಾಗ, 476 ಚೀಲ ಅಕ್ಕಿ ಪತ್ತೆಯಾಗಿದೆ.
ಅಧಿಕಾರಿಗಳನ್ನು ಕಂಡ ಲಾರಿ ಚಾಲಕ ಲಾರಿಯನ್ನು ಸಮೇತವಾಗಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದ್ದು, ಪೊಲೀಸರು ಲಾರಿಯನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಲಾರಿಯೊಂದಿಗೆ ಮತ್ತೊಂದು ಕಾರು ಕೂಡ ಸಂಚರಿಸುತ್ತಿದ್ದದ್ದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಪಾಸಣೆ ವೇಳೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಕಾರನ್ನು ಬಳಸಲಾಗಿತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ವಿಚಾರಣೆ ವೇಳೆ ಬಯಲಾದ ಹೆಸರುಗಳು
ಲಾರಿ ಚಾಲಕನ ವಿಚಾರಣೆ ನಡೆಸಿದಾಗ, ಸಿದ್ದಾಪುರ ತಾಲೂಕಿನ ಹಾಳಕಟ್ಟಾ ಭಾಗದ ರಾಘವೇಂದ್ರ ಭಟ್ಟ ಹಾಗೂ ರವೀಂದ್ರ ಭಟ್ಟ ಅವರು ಅಕ್ಕಿ ಸಾಗಾಟದ ವ್ಯವಹಾರದಲ್ಲಿ ಭಾಗಿಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರೊಂದಿಗೆ ಶಿರಸಿಯ ನಿಸಾರ ಅಹ್ಮದ್ ಸಯ್ಯದ್ ಅಹ್ಮದ್, ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಸಾಗರ್ ಶಿವಾನಂದ ಹಾದಿಮನಿ ಹಾಗೂ ಲಾರಿ ಚಾಲಕ ದುರದುಂಡಿ ಅವರ ಹೆಸರುಗಳು ಪ್ರಕರಣದಲ್ಲಿ ಕೇಳಿಬಂದಿವೆ.
ಸಣ್ಣ ಪ್ರಮಾಣದ ಬಾಳೆಕಾಯಿ ವ್ಯಾಪಾರದಿಂದ ಆರಂಭಿಸಿ, ನಂತರ ಅಕ್ರಮವಾಗಿ ಸರ್ಕಾರಿ ಪಡಿತರ ಅಕ್ಕಿಯನ್ನು ಸಾಗಿಸುವ ದಂಧೆಗೆ ಇಳಿದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಈ ಆರೋಪಗಳ ನಿಜಾಸ್ತಿತ್ವ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
₹8.56 ಲಕ್ಷ ಮೌಲ್ಯದ ಅಕ್ಕಿ ಜಪ್ತಿ
ಸಿದ್ದಾಪುರದಿಂದ ಮಹಾರಾಷ್ಟ್ರದ ಕೊಲ್ಲಾಪುರದತ್ತ ಸಾಗಿಸಲಾಗುತ್ತಿದ್ದ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ಲಾರಿಯನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಭಟ್ಟ, ರವೀಂದ್ರ ಭಟ್ಟ, ನಿಸಾರ ಅಹ್ಮದ್ ಸಯ್ಯದ್ ಅಹ್ಮದ್, ಸಾಗರ್ ಶಿವಾನಂದ ಹಾದಿಮನಿ ಹಾಗೂ ಲಾರಿ ಚಾಲಕ ದುರದುಂಡಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಿರಸಿ ಟೌನ್ ಠಾಣೆಯ ಪಿಎಸ್‌ಐ ನರಸಿಂಹಲು ಅವರ ನೇತೃತ್ವದಲ್ಲಿಯೂ ಕಾರ್ಯಾಚರಣೆ ನಡೆದಿದ್ದು, ಸರ್ಕಾರಿ ಪಡಿತರ ಅಕ್ಕಿಯ ಅಕ್ರಮ ಸಾಗಾಟದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.
ಬಡವರ ಪಾಲಿನ ಅನ್ನವನ್ನು ಕಾಳಸಂತೆಗೆ ಕಳುಹಿಸುವ ಅಕ್ರಮ ಜಾಲದ ವಿರುದ್ಧ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತನಿಖೆಯ ಬಳಿಕ ಮತ್ತಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0