ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲೇ ಬೆಳಕಿನ ಕೊರತೆ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಭಾಷಣ ಓದಿದ ಸಚಿವ ಸವದಿ

Aug 15, 2026 - 12:03
 0  173
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲೇ ಬೆಳಕಿನ ಕೊರತೆ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಭಾಷಣ ಓದಿದ ಸಚಿವ ಸವದಿ

ಆಪ್ತ ನ್ಯೂಸ್ ಕಾರವಾರ:

ಇಡಿಯ ರಾಜ್ಯಕ್ಕೆ ಉತ್ತರ ಕನ್ನಡ ಬೆಳಕು ಕೊಟ್ಟ ಜಿಲ್ಲೆ. ಆದರೆ ವಿಪರ್ಯಾಸ ಎಂದರೆ ದೇಶದ ಸ್ವಾತಂತ್ರ್ಯ ಹಬ್ಬದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನಡೆಸಿ, ಭಾಷಣ ಮಾಡುವಾಗ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದೆಯೇ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ ಭಾಷಣ ಓದುವಂತಾಯಿತು!

ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಕಾರವಾರದ ಕಾಜೂಬಾಗ್ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ದೇಶಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಪೊಲೀಸ್ ತುಕಡಿಗಳ ಆಕರ್ಷಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು.

ಆದರೆ, ಕಾರ್ಯಕ್ರಮದ ವೇಳೆ ನಡೆದ ಒಂದು ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಚಿವರು ಸ್ವಾತಂತ್ರ್ಯೋತ್ಸವದ ಭಾಷಣ ಆರಂಭಿಸಿದ ಸಂದರ್ಭದಲ್ಲಿ ಮೋಡ ಕವಿದ ವಾತಾವರಣದಿಂದ ನೈಸರ್ಗಿಕ ಬೆಳಕು ಕಡಿಮೆಯಾಗಿದ್ದರೂ, ವೇದಿಕೆಯಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇರಲಿಲ್ಲ. ಪರಿಣಾಮ, ಸಚಿವರಿಗೆ ಭಾಷಣದ ಪ್ರತಿಯನ್ನು ಓದಲು ತೊಂದರೆಯಾಯಿತು.

ಕೊನೆಗೆ ಸಚಿವ ಸವದಿ ತಮ್ಮ ಮೊಬೈಲ್‌ನ ಟಾರ್ಚ್ ಲೈಟ್ ಆನ್ ಮಾಡಿಕೊಂಡು ಅದರ ಬೆಳಕಿನಲ್ಲೇ ಭಾಷಣದ ಪ್ರತಿಯನ್ನು ಓದುವಂತಾಯಿತು. ಸಚಿವರು ಮೊಬೈಲ್ ಟಾರ್ಚ್ ಹಿಡಿದು ಭಾಷಣ ಓದುತ್ತಿರುವ ದೃಶ್ಯ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆಯಿತು.

ಘಟನೆಯಿಂದ ಅಸಮಾಧಾನಗೊಂಡ ಸಚಿವರು ಕಾರ್ಯಕ್ರಮದ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಮರ್ಪಕ ಬೆಳಕು ಸೇರಿದಂತೆ ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಶೇಷವೆಂದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ವಿದ್ಯುತ್ ಸಂಪರ್ಕದ ಸಮಸ್ಯೆ ಎದುರಿಸುತ್ತಿರುವ ಹಲವು ಗ್ರಾಮಗಳಿವೆ ಎಂಬ ಚರ್ಚೆಯ ನಡುವೆಯೇ, ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೇ ಸ್ವಾತಂತ್ರ್ಯೋತ್ಸವದಂತಹ ಪ್ರಮುಖ ಸರ್ಕಾರಿ ಕಾರ್ಯಕ್ರಮದಲ್ಲಿ ಬೆಳಕಿನ ಕೊರತೆಯಿಂದ ಮೊಬೈಲ್ ಟಾರ್ಚ್ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಗಳ ಕತ್ತಲೆಯನ್ನು ಹೋಗಲಾಡಿಸಬೇಕಾದ ಜಿಲ್ಲೆಯಲ್ಲಿ, ಸ್ವಾತಂತ್ರ್ಯೋತ್ಸವದ ವೇದಿಕೆಯಲ್ಲೇ ಸಚಿವರ ಭಾಷಣಕ್ಕೆ ಮೊಬೈಲ್ ಟಾರ್ಚ್ ಬೆಳಕು ಬೇಕಾದ ಪ್ರಸಂಗ—ಉತ್ತರ ಕನ್ನಡದ ವ್ಯವಸ್ಥೆಯ ಸ್ಥಿತಿಗೆ ಹಿಡಿದ ಕನ್ನಡಿಯಂತಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0