ಮಗನ ಅಪಘಾತದ ನೋವು ತಾಳಲಾರದೆ ತಾಯಿ ಆತ್ಮಹತ್ಯೆ; ಪತ್ನಿಯ ಸಾವಿನ ಆಘಾತಕ್ಕೆ ಪತಿಯೂ ಕಾಳಿ ನದಿಗೆ ಹಾರಿ ಸಾವು

10 ವರ್ಷದ ಮಗನಿಗೆ ಆಸರೆಯಾಗಬೇಕಿದ್ದ ಹೆತ್ತವರಿಬ್ಬರೂ ಕೆಲವೇ ದಿನಗಳಲ್ಲಿ ಸಾವು; ಅನಾಥನಾದ ಬಾಲಕ

Aug 11, 2026 - 17:19
 0  334
ಮಗನ ಅಪಘಾತದ ನೋವು ತಾಳಲಾರದೆ ತಾಯಿ ಆತ್ಮಹತ್ಯೆ; ಪತ್ನಿಯ ಸಾವಿನ ಆಘಾತಕ್ಕೆ ಪತಿಯೂ ಕಾಳಿ ನದಿಗೆ ಹಾರಿ ಸಾವು

ಆಪ್ತ ನ್ಯೂಸ್ ಕಾರವಾರ:

ಮಗನಿಗೆ ಸಂಭವಿಸಿದ ಅಪಘಾತ, ಆತನ ಆರೋಗ್ಯದ ಕುರಿತಾದ ಆತಂಕ ಹಾಗೂ ಪತ್ನಿಯ ದುರಂತ ಅಂತ್ಯ—ಇವೆಲ್ಲವೂ ಒಂದೇ ಕುಟುಂಬವನ್ನು ಕೆಲವೇ ದಿನಗಳಲ್ಲಿ ಕತ್ತಲೆಗೆ ದೂಡಿದ ಕರುಣಾಜನಕ ಘಟನೆ ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ನಡೆದಿದೆ.

ಮಗನ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ತಾಯಿ ಆತ್ಮಹತ್ಯೆಗೆ ಶರಣಾದರೆ, ಪತ್ನಿಯ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾದ ಪತಿಯೂ ಕಾಳಿ ನದಿಗೆ ಹಾರಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಪರಿಣಾಮ, ಸುಮಾರು 10 ವರ್ಷದ ಬಾಲಕ ಹೆತ್ತವರಿಬ್ಬರನ್ನೂ ಕಳೆದುಕೊಂಡು ಅನಾಥನಾಗಿದ್ದಾನೆ.

ಬಂಗಾರಪ್ಪ ನಗರದ ನಿವಾಸಿಗಳಾದ ವೆಂಕಟೇಶ ವಡ್ಡರ (38) ಹಾಗೂ ವಿಜಯಾ ವಡ್ಡರ (36) ದಂಪತಿಯ ಸುಮಾರು 10 ವರ್ಷದ ಪುತ್ರ ಶರತ್ ವಾರದ ಹಿಂದೆ ಬೈಕ್‌ನಿಂದ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ. ಬಾಲಕನಿಗೆ ತಲೆಯ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ ಮುಂದೆ ಆತ 18 ವರ್ಷ ತುಂಬಿದ ಬಳಿಕ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.

ಮಗನಿಗೆ ಎದುರಾದ ಆರೋಗ್ಯ ಸಮಸ್ಯೆಯಿಂದ ವಿಜಯಾ ತೀವ್ರವಾಗಿ ಆತಂಕಕ್ಕೊಳಗಾಗಿದ್ದರು. ಮಗನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಅವರು ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಕುಟುಂಬಸ್ಥರು ಧೈರ್ಯ ತುಂಬಿ, ಸಮಾಧಾನಪಡಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರು ಖಿನ್ನತೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಮಗನ ಚಿಂತೆ… ತಾಯಿಯ ದುರಂತ ಅಂತ್ಯ

ಆಗಸ್ಟ್ 9ರ ರಾತ್ರಿ ವಿಜಯಾ ಅವರು ಮನೆಯ ಮೇಲ್ಛಾವಣಿಯ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪತ್ನಿಯ ಸಾವಿನ ಸುದ್ದಿ ತಿಳಿದು ವೆಂಕಟೇಶ ತೀವ್ರ ಆಘಾತಕ್ಕೊಳಗಾಗಿದ್ದರು ಎನ್ನಲಾಗಿದೆ. ‘ನಾನೂ ಸಾಯುತ್ತೇನೆ’ ಎಂದು ಹೇಳುತ್ತಾ ಅವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಪತ್ನಿಯನ್ನು ಕಳೆದುಕೊಂಡ ನೋವು ಹಾಗೂ ಮಗನ ಭವಿಷ್ಯದ ಕುರಿತಾದ ಚಿಂತೆ ಅವರನ್ನು ಮತ್ತಷ್ಟು ಕುಗ್ಗಿಸಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅವರು ಕೊಡಿಭಾಗದ ಬಳಿ ಕಾಳಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು.

ಕಾಳಿ ನದಿಯಲ್ಲಿ ಪತ್ತೆಯಾದ ಶವ

ಮಂಗಳವಾರ ಕಾರವಾರ ತಾಲೂಕಿನ ಅಳೇವಾಡ–ಕೋಡಿಭಾಗ ಪ್ರದೇಶದಲ್ಲಿ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲುತ್ತಿರುವುದನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಸ್ಥಳಕ್ಕೆ ಧಾವಿಸಿ ಶವವನ್ನು ನೀರಿನಿಂದ ಮೇಲಕ್ಕೆ ತಂದರು. ಬಳಿಕ ಮೃತ ವ್ಯಕ್ತಿ ನಾಪತ್ತೆಯಾಗಿದ್ದ ವೆಂಕಟೇಶ ವಡ್ಡರ ಎಂಬುದು ದೃಢಪಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹೆತ್ತವರಿಬ್ಬರನ್ನೂ ಕಳೆದುಕೊಂಡ 10 ವರ್ಷದ ಬಾಲಕ

ಮಗನಿಗೆ ಆಸರೆಯಾಗಬೇಕಿದ್ದ ತಾಯಿ ಮತ್ತು ತಂದೆ ಕೆಲವೇ ದಿನಗಳ ಅಂತರದಲ್ಲಿ ಮೃತಪಟ್ಟಿರುವುದು ಕುಟುಂಬವನ್ನು ದುರಂತದ ಅಂಚಿಗೆ ತಳ್ಳಿದೆ.

ಒಂದೆಡೆ ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿರುವ ಬಾಲಕ ಶರತ್; ಮತ್ತೊಂದೆಡೆ ಹೆತ್ತವರಿಬ್ಬರನ್ನೂ ಕಳೆದುಕೊಂಡ ನೋವು. ಇದೀಗ ಸುಮಾರು 10 ವರ್ಷದ ಈ ಬಾಲಕನ ಮುಂದಿನ ಬದುಕು ಅತಂತ್ರವಾಗಿದ್ದು, ಕುಟುಂಬಸ್ಥರು ಹಾಗೂ ಸಮಾಜದ ನೆರವಿನ ಅಗತ್ಯ ಎದುರಾಗಿದೆ.

ಒಂದು ಅಪಘಾತದಿಂದ ಆರಂಭವಾದ ಆತಂಕ, ಕೆಲವೇ ದಿನಗಳಲ್ಲಿ ಒಂದು ಕುಟುಂಬದ ಇಬ್ಬರು ಸದಸ್ಯರ ಸಾವಿಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0