ಸಿದ್ದಾಪುರದ 'ಕಾನಗೋಡು' ಮಣ್ಣಿನ ಮಗನಿಗೆ ಕೇಂದ್ರದಲ್ಲಿ ಪಟ್ಟ: ಜಂಟಿ ಕಾರ್ಯದರ್ಶಿಯಾಗಿ ತೇಜಸ್ವಿ ನಾಯ್ಕ್ ಪದೋನ್ನತಿ!
ಆಪ್ತ ನ್ಯೂಸ್ ಸಿದ್ದಾಪುರ:
ಮಲೆನಾಡಿನ ಮಡಿಲು, ಶಿರಸಿ-ಸಿದ್ದಾಪುರದ ಜನತೆಗೆ ಇದು ಹೆಮ್ಮೆಯ ಕ್ಷಣ. ಸಿದ್ದಾಪುರ ತಾಲೂಕಿನ ಸಣ್ಣ ಗ್ರಾಮ 'ಕಾನಗೋಡು' ಮೂಲದ ದಕ್ಷ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ್ ಅವರು ಈಗ ದೆಹಲಿಯ ಅಧಿಕಾರ ಕೇಂದ್ರದಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೇರಿದ್ದಾರೆ. ಈವರೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಈಗ ಕೇಂದ್ರದ ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯದ (Ministry of Labour and Employment) ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿ 'ಜಲ ನಾಯಕ' ಎಂದೇ ಖ್ಯಾತಿ
2009ನೇ ಬ್ಯಾಚ್‌ನ ಮಧ್ಯಪ್ರದೇಶ ಕೇಡರ್‌ನ ಅಧಿಕಾರಿಯಾಗಿರುವ ತೇಜಸ್ವಿ ನಾಯ್ಕ್ ಅವರು ತಮ್ಮ ಆಡಳಿತಾತ್ಮಕ ಚಾಕಚಕ್ಯತೆಯಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
-
ಜಲಮಿಷನ್ ಕ್ರಾಂತಿ: ಮಧ್ಯಪ್ರದೇಶದಲ್ಲಿ ಅವರು ಜಾರಿಗೆ ತಂದಿದ್ದ 'ಜಲಮಿಷನ್' ಯೋಜನೆ ಕೇವಲ ರಾಜ್ಯಕ್ಕೆ ಸೀಮಿತವಾಗದೆ, ಅಂತರಾಷ್ಟ್ರೀಯ ಮಟ್ಟದಲ್ಲೂ ಮೆಚ್ಚುಗೆ ಗಳಿಸಿತ್ತು.
-
ದಕ್ಷ ಆಡಳಿತಗಾರ: ಭೋಪಾಲ್ ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಬರ್ವಾನಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವಾಗ ತಮ್ಮ ಜನಪರ ಕಾರ್ಯಗಳ ಮೂಲಕ ಅಪ್ಪಟ 'ಜನಸ್ನೇಹಿ ಅಧಿಕಾರಿ' ಎನಿಸಿಕೊಂಡಿದ್ದರು.
ಅನುಭವದ ಬಲ, ಕೇಂದ್ರದಲ್ಲಿ ಪ್ರಾಬಲ್ಯ
ಕೇಂದ್ರ ಸರ್ಕಾರದಲ್ಲಿ ತೇಜಸ್ವಿ ನಾಯ್ಕ್ ಅವರ ಕಾರ್ಯಕ್ಷಮತೆ ಅಪ್ರತಿಮವಾದುದು. ಈ ಹಿಂದೆ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರ ಆಪ್ತ ಕಾರ್ಯದರ್ಶಿಯಾಗಿ (PS) ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿನವರೆಗೆ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪಕ್ಕದಲ್ಲಿದ್ದು ಕನ್ನಡಿಗರ ದನಿಯಾಗಿ ಕೆಲಸ ಮಾಡುತ್ತಿದ್ದ ಇವರಿಗೆ, ಕೇಂದ್ರ ಸರ್ಕಾರ ಇದೀಗ ಕಾರ್ಮಿಕ ಸಚಿವಾಲಯದ ಜಂಟಿ ಕಾರ್ಯದರ್ಶಿಯಂತಹ ಜವಾಬ್ದಾರಿಯುತ ಹುದ್ದೆಯನ್ನು ನೀಡುವ ಮೂಲಕ ಅವರ ದಕ್ಷತೆಗೆ ಸೀಲ್ ಹಾಕಿದೆ.
ಪವರ್ ಫುಲ್ 'ಐಎಎಸ್ ದಂಪತಿ': ದೆಹಲಿಯಲ್ಲಿ ಕನ್ನಡಿಗರ ಪಾರುಪತ್ಯ!
ತೇಜಸ್ವಿ ನಾಯ್ಕ್ ಅವರ ಸಾಧನೆಗೆ ಸಾಟಿಯಾಗಿ ನಿಂತಿರುವುದು ಅವರ ಪತ್ನಿ ಸ್ವಾತಿ ಮೀನಾ ನಾಯ್ಕ್. ಇವರು ಕೂಡ ಮಧ್ಯಪ್ರದೇಶ ಕೇಡರ್‌ನ (2007 ಬ್ಯಾಚ್) ದಕ್ಷ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಶೇಷತೆ: ಪತಿ-ಪತ್ನಿ ಇಬ್ಬರೂ ಕೇಂದ್ರ ಸರ್ಕಾರದ ಅತ್ಯುನ್ನತ 'ಜಂಟಿ ಕಾರ್ಯದರ್ಶಿ' (Joint Secretary) ಹುದ್ದೆಯನ್ನು ಅಲಂಕರಿಸಿರುವುದು ಆಡಳಿತ ವಲಯದಲ್ಲಿ ಅಪರೂಪದ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಜಿಲ್ಲೆಯಾದ್ಯಂತ ಸಂಭ್ರಮದ ಅಲೆ
ಮೂಲತಃ ಕಾನಗೋಡಿನವರಾಗಿದ್ದು, ಪ್ರಸ್ತುತ ಶಿರಸಿಯಲ್ಲಿ ಮನೆ ಹೊಂದಿರುವ ತೇಜಸ್ವಿ ನಾಯ್ಕ್ ಅವರಿಗೆ ಜಿಲ್ಲೆಯ ಗಣ್ಯರು, ಆಪ್ತರು ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಮಲೆನಾಡಿನ ಪ್ರತಿಭೆಗಳು ರಾಷ್ಟ್ರ ರಾಜಧಾನಿಯಲ್ಲಿ ದೇಶದ ನೀತಿ-ನಿಯಮಗಳನ್ನು ರೂಪಿಸುವ ಹಂತಕ್ಕೆ ಬೆಳೆದಿರುವುದು ಜಿಲ್ಲೆಯ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ.
ತೇಜಸ್ವಿ ನಾಯ್ಕ್ ಅವರಿಗೆ ಶುಭಾಶಯಗಳು! ಅವರ ಹೊಸ ಜವಾಬ್ದಾರಿ ಯಶಸ್ವಿಯಾಗಲಿ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0