ಆಪ್ತ ನ್ಯೂಸ್ ಶಿರಸಿ:
ಬೇಡ್ತಿ-ವರದಾ ನದಿ ತಿರುವು ಯೋಜನೆಯನ್ನು ಹಾವೇರಿ ಭಾಗದ ಜನರ ಕುಡಿಯುವ ನೀರಿಗಾಗಿ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಲಿಸುವ ಕೆಲಸ ಆಗಿದೆ, ಅಸಲಿಯಾಗಿ ಇದು ಕುಡಿಯುವ ನೀರಿನ ಯೋಜನೆಯೇ ಅಲ್ಲ, ಜೊತೆಗೆ ಸರಕಾರದ ವೆಬ್ಸೈಟ್ ನಲ್ಲಿ ದೊರೆತ ದಾಖಲೆಗಳ ಪ್ರಕಾರ ರಾಯಚೂರು ಜಿಲ್ಲೆಗೆ ನೀರಾವರಿಗೆ ಎಂದು ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ರಾಯಚೂರಿಗೆ ನೀರು ಬೇಕಿದ್ದಲ್ಲಿ ಹಾವೇರಿಯವರು ಹೋರಾಟ ಮಾಡುವುದು ನೋಡಿದರೆ, ಇದರ ಲಾಭ ಬೇರೆ ಏನೋ ಇದ್ದಂತೆ ಕಾಣುತ್ತದೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಬುಧವಾರ ನಗರದ ಮಧುವನ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸ್ತುತ ಬೇಡ್ತಿ ವರದಾ ನದಿ ಯೋಜನೆ ಇಂದು ಬಹಳ ಚರ್ಚೆ ಆಗುತ್ತಿರುವ ವಿಷಯ. ಕುಡಿಯುವ ನೀರಿನ ಹೆಸರಿನಲ್ಲಿ ನೀರಾವರಿ ಉದ್ದೇಶಕ್ಕಾಗಿಯೇ ಅನುಷ್ಠಾನ ಮಾಡುವ ಯೋಜನೆಯಾದರೆ ಅದು ಖಂಡಿತ ಅರ್ಥಹೀನ. ನಮ್ಮ ಜಿಲ್ಲೆಯಲ್ಲಿಯೇ ನೀರಾವರಿಗೆ, ಕುಡಿಯುವ ನೀರಿಗೆ ಸಮಸ್ಯೆ ಇದೆ.
ಹರ ಮುನಿದರೆ ಗುರು ಕಾಯುವನು ಎಂಬಂತಹ ಮಾತಿದೆ. ಯಾವುದೇ ಸ್ವಾರ್ಥ ಇಲ್ಲದೆಯೇ ಶ್ರೀಗಳು ಈ ಯೋಜನೆಯ ತಡೆಗೆ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ. ಗುರುಗಳ ಮಾತಿಗೆ ಕಟಿ ಬದ್ಧರಾಗಿರುವುದು ಎಲ್ಲರ ಕರ್ತವ್ಯ. ನಮ್ಮ ಜಿಲ್ಲೆಯ ಜನರಿಗಾಗಿ ಈ ನದಿಗಳ ನೀರನ್ನು ಬಳಸುವ ಯೋಜನೆಗಳಿಗೆ ಸರಕಾರ ಪ್ರಸ್ತಾವನೆ ಸಲ್ಲಿಸಬೇಕು. ಈಗಿನ ಯೋಜನೆ ಪ್ರಕಾರ ಭಾರಿ ಅಣೆಕಟ್ಟು ನಿರ್ಮಿಸುವ ಮೂಲಕ ಜನವಸತಿ, ಕೃಷಿ ಪ್ರದೇಶಗಳು ಮುಳುಗಡೆಯಾಗುವುದರಲ್ಲಿ ಸಂಶಯವಿಲ್ಲ. ಇದನ್ನೇ ಪಕ್ಷತೀತವಾಗಿ ನಾವೆಲ್ಲರೂ ಒಗ್ಗೂಡಿ ವಿರೋಧಿಸುತ್ತೇವೆ ಎಂದರು.
ನಿವೃತ್ತ ಪಿ.ಡಬ್ಲ್ಯೂ. ಡಿ ಎಂಜಿನಿಯರ್ ವಿ. ಎಂ. ಭಟ್ ಮಾತನಾಡಿ, ನಮ್ಮ ೨ ಜೀವನದಿಗಳಾದ ಶಾಲ್ಮಲಾ ಹಾಗೂ ಬೇಡ್ತಿ ಹಾಗೂ ಅದನ್ನು ನಂಬಿ ಬದುಕುತ್ತಿರುವ ಕನಿಷ್ಠ ೫೦ಕ್ಕೂ ಹೆಚ್ಚು ಹಳ್ಳಿಗಳನ್ನು ಸಾಯಿಸಲು ಸರಕಾರ ಹೊರಟಿದೆ. ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಮಾತನಾಡುವ ಇವರು ನದಿಗಳನ್ನು ಸಾಯಿಸಿ ನಮ್ಮ ಪ್ರವಾಸೋದ್ಯಮವನ್ನು ಸಾಯಿಸಲು ಹೊರಟಿದ್ದಾರೆ. ಈ ನದಿ ಯೋಜನೆಯನ್ನು ಅನುಷ್ಠಾನ ಮಾಡಿದರೆ ನಮ್ಮ ಜಿಲ್ಲೆಯ ಜನರು ಕುಡಿಯುವ ನೀರಿಗೆ ಏನು ಮಾಡಬೇಕು ? ಬೇಡ್ತಿ ನದಿಯಲ್ಲಿ ಈಗಾಗಲೇ ನೀರು ಕೊರತೆಯಾಗಿದೆ. ಬೇಡ್ತಿ ನದಿಯಿಂದ ಯಲ್ಲಾಪುರಕ್ಕೆ ಕುಡಿಯುವ ನೀರು ಕೊಂಡೊಯ್ಯುವ ಯೋಜನೆಯೂ ವಿಫಲವಾಗಿದೆ. ಶಿರಸಿ, ಯಲ್ಲಾಪುರ ಭಾಗದಲ್ಲಿಯೇ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ ಇರುವಾಗ ಈ ಯೋಜನೆ ಅನುಷ್ಠಾನ ಮಾಡಲು ಹೊರಟಿರುವುದು ಎಷ್ಟು ಸರಿ ? ಜಿಲ್ಲೆಯಲ್ಲಿರುವ ನೀರಾವರಿ ಯೋಜನೆಗಳ ಸಮಸ್ಯೆ ಪರಿಹಾರಕ್ಕೆ ಹಣ ನೀಡದ ಸರಕಾರ ಅಲ್ಲೆಲ್ಲೋ ಸಾವಿರ ಕೋಟಿ ನೀಡಿ ನೀರು ಕೊಂಡೊಯ್ಯುವುದು ಸರಿಯೇ ? ೧೦೦ ಕೋಟಿ ನೀಡಿ ನಮ್ಮ ಜಿಲ್ಲೆಯ ನೀರಾವರಿ ಸಮಸ್ಯೆ ಪರಿಹರಿಸಿ ಕೊಡಿ. ಇಲ್ಲಿರುವ ಸಮಸ್ಯೆಗಳನ್ನು ಮೊದಲು ನೀಗಿಸಿಕೊಡಿ. ನಮ್ಮ ನದಿಗಳನ್ನು ದಯವಿಟ್ಟು ಸಾಯಿಸಬೇಡಿ. ನಮ್ಮ ನದಿಗಳಿಗೆ ಮಿನಿ ಚೆಕ್ ಡ್ಯಾಮ್ ನಿರ್ಮಿಸಿ ನಮ್ಮ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಸಮಸ್ಯೆ ಬಗೆ ಹರಿಸಿ. ಇದೊಂದು ಅವಾಸ್ತವಿಕ ಯೋಜನೆ. ಈ ಯೋಜನೆ ನಮ್ಮ ಪರಿಸರ , ಪ್ರವಾಸೋದ್ಯಮಕ್ಕೆ ಮಾರಕವಾಗಿದೆ. ಈ ಹಾನಿಕರ ಯೋಜನೆ ಕೈ ಬಿಟ್ಟು ಜಿಲ್ಲೆಯಲ್ಲಿರುವ ನೀರಾವರಿ ಯೋಜನೆಗಳನ್ನು ಸುಧಾರಿಸುವತ್ತ ಸರಕಾರ ಗಮನ ಹರಿಸಬೇಕಿದೆ ಎಂದರು.
ಮಾಜಿ ಜಿ. ಪಂ ಸದಸ್ಯ ಹಾಲಪ್ಪ ಮಾತನಾಡಿ, ನಮ್ಮಲ್ಲಿ ಹರಿಯುವ ನೀರಿನ ಪೂರ್ಣ ಬಳಕೆ ಜಿಲ್ಲೆಗೆ ಆಗಿ ಉಳಿದರೆ ಮಾತ್ರ ಹೊರ ಜಿಲ್ಲೆಗೆ ನೀಡಬೇಕು. ನಮ್ಮ ಜಿಲ್ಲೆಗೆ ಅವಶ್ಯಕತೆ ಇರುವ ನೀರಾವರಿ, ಕುಡಿಯುವ ನೀರು ಯೋಜನೆ ಸೇರಿದಂತೆ ವಿವಿಧ ಯೋಜನೆಯನ್ನು ಜಿಲ್ಲೆಯಲ್ಲಿರುವ ತಜ್ಞರೆಲ್ಲರೂ ಸೇರಿ ವಿವಿಧ ಸಂಘಟನೆಗಳು ಮುಂದಾಗಿ ಯೋಜನಾ ವರದಿ ತಯಾರಾಗಬೇಕು. ನಮ್ಮದೆಲ್ಲವನ್ನು ಬೇರೆಡೆ ಕೊಟ್ಟು ನಾವು ಬದುಕುವುದು ಹೇಗೆ ? ಯೋಜನೆಯನ್ನು ಎಲ್ಲರು ಪಕ್ಷಾತೀತವಾಗಿ ವಿರೋಧಿಸೋಣ. ಈ ಯೋಜನೆಯಿಂದ ಪರಿಸರಕ್ಕೆ, ಪ್ರವಾಸೋದ್ಯಮಕ್ಕೆ, ಕೃಷಿ ತೋಟಗಾರಿಕೆಗೆ ಉಂಟಾಗುವ ಹಾನಿಯ ಕುರಿತಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದರು.
~~~~~~~~~~~~~~~~~
ಸಚಿವ ವೈದ್ಯರ ದ್ವಿಮುಖ ನೀತಿಗೆ ಅನಂತಮೂರ್ತಿ ತಿರುಗುಬಾಣ:
ಎಲ್ಲ ಗುರುಗಳ ನೇತೃತ್ವದಲ್ಲಿ ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ರಾಜಕೀಯ ನಾಯಕರು ಉಪಸ್ಥಿತರಿದ್ದು, ಪಕ್ಷಾತೀತ ಹೋರಾಟಕ್ಕೆ ಗುರುಗಳೇ ವೇದಿಕೆಯಲ್ಲಿ ಕರೆ ನೀಡಿದ್ದರು. ಆದರೂ ಸಹ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರು ರಾಜಕೀಯ ವಿಷಯವನ್ನು ವೇದಿಕೆಯಲ್ಲಿ ಪ್ರಸ್ತಾಪಿಸಿದ್ದು ಆಕ್ಷೇಪಾರ್ಹ. ವೈದ್ಯರ ಘನತೆಗೆ ಅದು ಶೋಭೆಯಲ್ಲ. ಆದಾಗ್ಯೂ ನದಿ ಜೋಡಣೆ ಯೋಜನೆ ಇಂದು ನಿನ್ನೆಯದ್ದಲ್ಲ. ಇದು ವಾಜಪೇಯಿ ಕಾಲದಲ್ಲಿಯೇ ಯೋಜಿತವಾದ ಯೋಜನೆ. ಇನ್ನು ಈ ಬೇಡ್ತಿ ವರದಾ ಯೋಜನೆಯ ಪಿ ಎಫ್ ಆರ್ 2017ರಲ್ಲಿಯೇ ಆಗಿತ್ತು. 2017ರಲ್ಲಿ ಯಾವ ಸರಕಾರ ಆಡಳಿತದಲ್ಲಿತ್ತು ? ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ರಾಜ್ಯ ಸರಕಾರ ಹೇಳುತ್ತಿರುವ ಕೇಂದ್ರದ ೯೦% ರಾಜ್ಯದ ೧೦% ಅನುದಾನದ ವಾಸ್ತವ ಬೇರೆಯೇ ಇದೆ . ದಾಖಲೆಯ ಅನುಸಾರ ರಾಜ್ಯ ಸರಕಾರವೇ ಯೋಜನೆಯ ಆರಂಭದಲ್ಲಿ ಎಲ್ಲ ವೆಚ್ಚ ಭರಿಸಬೇಕು. ಯೋಜನೆಯ ಆರಂಭ, ಪ್ರಸ್ತಾವನೆಯೂ ಸಹ ರಾಜ್ಯ ಸರಕಾರದಿಂದಲೇ ಪ್ರಾರಂಭ ಆಗಬೇಕು ಎಂದರೆ ಯೋಜನೆಯು ಕೇಂದ್ರ ಸರಕಾರದ್ದು ಎಂದು ಎತ್ತಿ ಹಾಕುವುದು ಸರಿ ಅಲ್ಲ. ಕಾಗೇರಿಯವರು ಶಿರಸಿ ಆಸ್ಪತ್ರೆಗೆ 142 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದರು. ಆಸ್ಪತ್ರೆಯ ಕಟ್ಟಡ ಕಾಮಗಾರಿ ಆಗುತ್ತಿದೆಯೇ ವಿನಃ ಸಲಕರಣೆಗಳ ಖರೀದಿಗೆ ಹಣ ಮಂಜೂರಾಗುತ್ತಿಲ್ಲ. ಅಲ್ಲದೇ ಅಂದಿನ ಬಿಜೆಪಿ ಸರಕಾರ ಶಿರಸಿಗೆ ನೀಡಿದ ಪರಿಸರ ವಿಶ್ವವಿದ್ಯಾಲಯವೂ ಬಜೆಟ್ ನಲ್ಲಿ ಮಂಡನೆಯಾಗಿತ್ತು ಅದು ಯಾಕೆ ಅನುಷ್ಠಾನವಾಗಿಲ್ಲ ? ಜನರ ಅವಶ್ಯಕತೆ ಇರುವುದನ್ನು ಅನುಷ್ಠಾನ ಮಾಡದೇ ಕೇಂದ್ರ ಸರಕಾರದ ಹೆಸರಿನಲ್ಲಿ ಜನರಿಗೆ, ಪರಿಸರಕ್ಕೆ ಹಾನಿಯಾಗುವ ಯೋಜನೆಗಳನ್ನು ರಾಜ್ಯ ಸರಕಾರ ಅನುಷ್ಠಾನ ಮಾಡುತ್ತಿರುವುದು ಸತ್ಯ. ಕಾಗೇರಿಯವರು ಶಾಸಕರಾಗಿ ಇರುವವರೆಗೆ ಈ ಯೋಜನೆ ಅನುಷ್ಠಾನ ಆಗದಂತೆ ತಡೆಹಿಡಿದಿದ್ದರು ಎಂಬುದು ಇದೀಗ ಮರೆಮಾಚಿರುವ ಸಂಗತಿಯಾಗಿದೆ. ವೇದಿಕೆಯಲ್ಲಿ ಸ್ವಾಮೀಜಿಗಳ ಎದುರಿಗೆ ಎಲ್ಲರೂ ಒಟ್ಟಾಗಿ ಈ ಯೋಜನೆಯನ್ಮು ವಿರೋಧಿಸೋಣ ಎಂದು ಒಪ್ಪಿಕೊಂಡಿರುವ ಮಾನ್ಯ ಉಸ್ತುವಾರಿ ಸಚಿವರು, ಇದೀಗ ಹೋದಲ್ಲಿ ಬಂದಲ್ಲಿ ಇದು ಕೇಂದ್ರದ ಯೋಜನೆ, ಅವರು ಬಂದ್ ಮಾಡಿಸಲಿ ಎಂಬ ರೀತಿಯಲ್ಲಿ ಲೂಸ್ ಟಾಕ್ ಮಾಡುವುದನ್ನು ನಿಲ್ಲಿಸಲಿ, ಇದು ಸಚಿವರ ದ್ವಿಮುಖ ನೀತಿಯನ್ನು ಬಯಲಿಗೆ ತಂದಿದೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಸಚಿವ ವೈದ್ಯರಿಗೆ ಟಾಂಗ್ ನೀಡಿದರು.
~~~~~~~~~~~~~~~~
ಜಿಲ್ಲೆಯಲ್ಲಿಯೇ ಕುಡಿಯುವ ನೀರು, ಕೃಷಿಗೆ ನೀರಾವರಿ ಸಮಸ್ಯೆ ಇದೆ. ಈ ನಿಟ್ಟಿನಲ್ಲಿ ಇಲ್ಲಿಯ ನದಿಗಳಿಗೆ ಮಿನಿ ಚೆಕ್ ಡ್ಯಾಮ್ ನಿರ್ಮಿಸಿ, ಆ ನೀರನ್ನು ನಮ್ಮ ಜನರಿಗೆ ಉಪಯೋಗುವಂತೆ ಯೋಜನೆ ಸಿದ್ಧಪಡಿಸಿ ಸಣ್ಣನೀರಾವರಿ, ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗುವುದು. ಸರಕಾರವೂ ಸಹ ಉತ್ತರ ಕನ್ನಡದ ನೀರಾವರಿ ಸಮಸ್ಯೆಗೆ ಅನುದಾನ ನೀಡಬೇಕು. ಇದು ನಮ್ಮೆಲ್ಲರ ಆಗ್ರಹವಾಗಿದೆ.
ಅನಂತಮೂರ್ತಿ ಹೆಗಡೆ,
ಬಿಜೆಪಿ ಮುಖಂಡ