ದೇಶಕ್ಕಾಗಿ ಜೀವ ಮುಡಿಪಾಗಿಟ್ಟ ಯೋಧ ಈಶ್ವರ ನಾಯ್ಕರಿಗೆ ಅಂತಿಮ ನಮನ: ಕಂಬನಿ ಮಿಡಿದ ಜೋಯಿಡಾ
ಆಪ್ತ ನ್ಯೂಸ್ ಜೋಯಿಡಾ:
ದೇಶಸೇವೆಯಲ್ಲಿ ತೊಡಗಿದ್ದ ಭಾರತೀಯ ಸೈನ್ಯದ ಯೋಧ ಈಶ್ವರ ವಸಂತ ನಾಯ್ಕ ಅವರ ಪಾರ್ಥಿವ ಶರೀರ ಇಂದು ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಪಟ್ಟಣಕ್ಕೆ ಆಗಮಿಸಿದ್ದು, ಸಾರ್ವಜನಿಕರು, ಮಾಜಿ ಸೈನಿಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾವಪೂರ್ಣ ಅಂತಿಮ ನಮನ ಸಲ್ಲಿಸಿದರು.
ಜೋಯಿಡಾ ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಂಗೋಳ-ಮಾಲಾಂಗಿಣಿ ಗ್ರಾಮದ ನಿವಾಸಿಯಾಗಿದ್ದ ಯೋಧ ಈಶ್ವರ ವಸಂತ ನಾಯ್ಕ ಅವರ ಪಾರ್ಥಿವ ಶರೀರ ಜೋಯಿಡಾದ ಶಿವಾಜಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಶೋಕದ ವಾತಾವರಣ ನಿರ್ಮಾಣವಾಯಿತು. ನೂರಾರು ಜನರು ಸಾಲುಗಟ್ಟಿ ನಿಂತು ಪುಷ್ಪನಮನ ಸಲ್ಲಿಸಿ, ದೇಶಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ ವೀರ ಯೋಧನಿಗೆ ಗೌರವ ಸಲ್ಲಿಸಿದರು.
ಬಳಿಕ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಇರಂಗೋಳ-ಮಾಲಾಂಗಿಣಿಗೆ ಕೊಂಡೊಯ್ಯಲಾಯಿತು. ಅಲ್ಲಿ ಕುಟುಂಬ ಸದಸ್ಯರು, ಬಂಧು-ಬಳಗ, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಈ ವೇಳೆ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಂತೋಷ ಸಾವಂತ, "ದೇಶದ ಭದ್ರತೆಗಾಗಿ ತಮ್ಮ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ್ದ ಯೋಧ ಈಶ್ವರ ವಸಂತ ನಾಯ್ಕ ಅವರ ಅಕಾಲಿಕ ನಿಧನ ಜೋಯಿಡಾ ತಾಲೂಕಿಗೆ ತುಂಬಲಾರದ ನಷ್ಟವಾಗಿದೆ. ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ," ಎಂದು ಸಂತಾಪ ಸೂಚಿಸಿದರು.
ಯೋಧನ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಜೋಯಿಡಾ ತಾಲೂಕಿನಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಅಂತಿಮ ದರ್ಶನಕ್ಕಾಗಿ ಆಗಮಿಸಿದ ಸಾರ್ವಜನಿಕರು ಕಂಬನಿ ಮಿಡಿದು ವೀರ ಯೋಧನಿಗೆ ಗೌರವ ನಮನ ಸಲ್ಲಿಸಿದರು. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಯೋಧ ಈಶ್ವರ ವಸಂತ ನಾಯ್ಕ ಅವರ ತ್ಯಾಗ ಮತ್ತು ಸೇವೆ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ.
What's Your Reaction?
Like
0
Dislike
0
Love
0
Funny
1
Angry
0
Sad
0
Wow
0



