ಮೀನುಗಾರಿಕಾ ಬಲೆಗೆ ಕಾಲು ಸಿಲುಕಿ ಸಮುದ್ರದಲ್ಲಿ ಮುಳುಗಿ ಮೀನುಗಾರ ದಾರುಣ ಸಾವು

Jul 21, 2026 - 10:52
 0  77
ಮೀನುಗಾರಿಕಾ ಬಲೆಗೆ ಕಾಲು ಸಿಲುಕಿ ಸಮುದ್ರದಲ್ಲಿ ಮುಳುಗಿ ಮೀನುಗಾರ ದಾರುಣ ಸಾವು

ಆಪ್ತ ನ್ಯೂಸ್ ಹೊನ್ನಾವರ:

ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊಬ್ಬ ಮೀನುಗಾರಿಕಾ ಬಲೆಗೆ ಕಾಲು ಸಿಲುಕಿ ಅರಬ್ಬೀ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದಲ್ಲಿ ನಡೆದಿದೆ.

ಮಂಕಿ ಹೊಸಹಿತ್ತಲ ನಿವಾಸಿ ಲಿಂಗ ಮಂಜು ಹರಿಕಂತ್ರ (55) ಮೃತ ದುರ್ದೈವಿ. ಶನಿವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಅವರು ಎಂದಿನಂತೆ ಮೀನುಗಾರಿಕೆಗಾಗಿ ಅರಬ್ಬೀ ಸಮುದ್ರಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಅವರ ಕಾಲು ಮೀನುಗಾರಿಕಾ ಬಲೆಗೆ ಸಿಲುಕಿದ್ದು, ಸಮುದ್ರದ ಪ್ರಬಲ ಅಲೆಗಳ ರಭಸಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ ತಡವಾದರೂ ಮನೆಗೆ ಹಿಂದಿರುಗದ ಕಾರಣ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದ್ದರು. ಭಾನುವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಮಂಕಿ ದೊಡ್ಡಗುಂದ ಸಮುದ್ರ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಮಂಕಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮೃತ ಲಿಂಗ ಮಂಜು ಹರಿಕಂತ್ರ ಅವರು ಅತ್ಯಂತ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಂಕಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಮೀನುಗಾರರ ಸುರಕ್ಷತೆಗೆ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯವೂ ಸ್ಥಳೀಯರಿಂದ ಕೇಳಿಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0