ಕುಮಟಾ–ಕತಗಾಲ ಕಬ್ಬರಗಿಗೆ ನೂತನ ಬಸ್ ಸೇವೆ ಆರಂಭ; ಶಾಸಕ ದಿನಕರ ಶೆಟ್ಟಿ ಚಾಲನೆ, ಗ್ರಾಮಸ್ಥರ ಬಹುಕಾಲದ ಕನಸು ನನಸು
ಆಪ್ತ ನ್ಯೂಸ್ ಕುಮಟಾ:
ತಾಲೂಕಿನ ಕತಗಾಲ ಕಬ್ಬರಗಿ ಭಾಗದ ಜನರ ಬಹುದಿನಗಳ ಕನಸಾಗಿದ್ದ ನೂತನ ಬಸ್ ಸೇವೆಗೆ ಕೊನೆಗೂ ಚಾಲನೆ ದೊರೆತಿದೆ. ಕುಮಟಾದಿಂದ ಕತಗಾಲ ಮೂಲಕ ಕಬ್ಬರಗಿವರೆಗೆ ಸಂಚರಿಸಲಿರುವ ನೂತನ ಬಸ್‌ಗೆ ಶಾಸಕ ದಿನಕರ್ ಕೆ. ಶೆಟ್ಟಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಕಬ್ಬರಗಿ ಭಾಗದ ಜನರು ಹಲವು ವರ್ಷಗಳಿಂದ ನೇರ ಬಸ್ ಸೇವೆ ಕಲ್ಪಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದರು. ಈ ಬೇಡಿಕೆಗೆ ಸ್ಪಂದಿಸಿ ಇದೀಗ ನೂತನ ಬಸ್ ಸೇವೆ ಆರಂಭಗೊಂಡಿದ್ದು, ಸ್ಥಳೀಯರಲ್ಲಿ ಸಂತಸ ಮನೆಮಾಡಿದೆ.
ಇಲ್ಲಿಯವರೆಗೆ ಬಸ್ ಹತ್ತಲು ಈ ಭಾಗದ ನಿವಾಸಿಗಳು ನಾಲ್ಕರಿಂದ ಐದು ಕಿಲೋಮೀಟರ್‌ಗಳವರೆಗೆ ನಡೆದು ಮುಖ್ಯ ರಸ್ತೆಗೆ ಬರಬೇಕಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.
ಈಗ ನೂತನ ಬಸ್ ಸೇವೆ ಆರಂಭವಾಗಿರುವುದರಿಂದ ಕಬ್ಬರಗಿ ಭಾಗದ ಜನರ ದೀರ್ಘಕಾಲದ ಸಂಚಾರ ಸಮಸ್ಯೆಗೆ ಪರಿಹಾರ ದೊರೆತಿದ್ದು, ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಆರೋಗ್ಯ ಸೇವೆಗಳಿಗಾಗಿ ಕುಮಟಾಕ್ಕೆ ತೆರಳುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಗ್ರಾಮಸ್ಥರು ನೂತನ ಬಸ್ ಸೇವೆ ಆರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಜನರ ಅಗತ್ಯವನ್ನು ಮನಗಂಡು ಬಸ್ ಸೇವೆ ಕಲ್ಪಿಸಿದ ಶಾಸಕ ದಿನಕರ್ ಕೆ. ಶೆಟ್ಟಿ ಹಾಗೂ ಸಾರಿಗೆ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



