ಬೇಡ್ತಿ–ವರದಾ ಯೋಜನೆಯ ಹಣಕಾಸಿನ ಹೊಣೆ ಯಾರದ್ದು? ಕೇಂದ್ರಕ್ಕೆ ಡಾ. ರವಿಕಿರಣ ಪಟವರ್ಧನ ಪ್ರಶ್ನೆ!

ಕೇಂದ್ರ–ರಾಜ್ಯ ಸರ್ಕಾರಗಳ ಅನುದಾನ, ಡ್ರೋನ್ ಸಮೀಕ್ಷೆ, ಪರಿಸರ ಸಂರಕ್ಷಣೆ ಹಾಗೂ ಪುನರ್ವಸತಿ ವೆಚ್ಚದ ಕುರಿತು ಸ್ಪಷ್ಟನೆಗೆ ಮನವಿ

Oct 27, 2026 - 17:44
 0  83
ಬೇಡ್ತಿ–ವರದಾ ಯೋಜನೆಯ ಹಣಕಾಸಿನ ಹೊಣೆ ಯಾರದ್ದು? ಕೇಂದ್ರಕ್ಕೆ ಡಾ. ರವಿಕಿರಣ ಪಟವರ್ಧನ ಪ್ರಶ್ನೆ!

ಆಪ್ತ ನ್ಯೂಸ್‌ ಶಿರಸಿ:

ಪ್ರಸ್ತಾವಿತ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಹಣಕಾಸಿನ ಹೊಣೆಗಾರಿಕೆ ಯಾರದ್ದು? ಯೋಜನೆಯ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆಯೇ ಅಥವಾ ಕೇಂದ್ರ ಸರ್ಕಾರವೂ ಅನುದಾನ ನೀಡಲಿದೆಯೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿರುವ ಡಾ. ರವಿಕಿರಣ ಪಟವರ್ಧನ ಅವರು, ಈ ಕುರಿತು ಅಧಿಕೃತ ಲಿಖಿತ ಸ್ಪಷ್ಟನೆ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಬೇಡ್ತಿ–ವರದಾ ಯೋಜನೆಯು ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದ್ದು, ಕೇಂದ್ರ ಸರ್ಕಾರವು ಕೇವಲ ತಾಂತ್ರಿಕ ಸಹಕಾರ ನೀಡಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ. ಯೋಜನೆಯ ಹಣಕಾಸಿನ ಮಾದರಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತ್ಯೇಕ ಜವಾಬ್ದಾರಿಗಳು ಹಾಗೂ ಇದುವರೆಗೆ ನೀಡಿರುವ ಹಣಕಾಸಿನ ಅನುಮೋದನೆಗಳ ಸ್ಥಿತಿಗತಿಗಳ ಬಗ್ಗೆ ಸಚಿವಾಲಯವು ಸ್ಪಷ್ಟ ಮಾಹಿತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕೇಂದ್ರದಿಂದ ಅನುದಾನ ಇದೆಯೇ?

ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ಹಣಕಾಸಿನ ನೆರವು, ಅನುದಾನ ಅಥವಾ ಸಾಲ ಮಂಜೂರು ಮಾಡಿದೆಯೇ? ಮುಂದಿನ ದಿನಗಳಲ್ಲಿ ನೆರವು ನೀಡುವ ಪ್ರಸ್ತಾಪವಿದೆಯೇ? ಯೋಜನೆಯ ಅಂದಾಜು ಒಟ್ಟು ವೆಚ್ಚ ಎಷ್ಟು? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಎಷ್ಟು ಪ್ರಮಾಣದ ವೆಚ್ಚವನ್ನು ಭರಿಸಲಿವೆ? ಎಂಬ ಪ್ರಶ್ನೆಗಳನ್ನು ಅವರು ಮುಂದಿಟ್ಟಿದ್ದಾರೆ.

ಯೋಜನೆಯ ಸಂಪೂರ್ಣ ಹೊಣೆಗಾರಿಕೆ ರಾಜ್ಯ ಸರ್ಕಾರದ್ದೇ ಆಗಿದ್ದರೆ, ವಿವರವಾದ ಯೋಜನಾ ವರದಿ (DPR) ತಯಾರಿಕೆ, ಕಾರ್ಯಸಾಧ್ಯತಾ ಅಧ್ಯಯನ, ನಿರ್ಮಾಣ, ಕಾರ್ಯಾಚರಣೆ ಹಾಗೂ ನಿರ್ವಹಣೆ ಸೇರಿದಂತೆ ಪ್ರತಿಯೊಂದು ಹಂತದ ವೆಚ್ಚವನ್ನೂ ರಾಜ್ಯ ಸರ್ಕಾರವೇ ಭರಿಸಲಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರಿದ್ದಾರೆ.

ಡ್ರೋನ್ ಸಮೀಕ್ಷೆಯ ಟೆಂಡರ್ ಯಾರಿಂದ?

ಬೇಡ್ತಿ–ವರದಾ ಯೋಜನೆಗೆ ಸಂಬಂಧಿಸಿದ ಡ್ರೋನ್ ಆಧಾರಿತ ಸಮೀಕ್ಷೆಯ ಟೆಂಡರ್ ಕುರಿತು ಕೂಡ ಡಾ. ರವಿಕಿರಣ ಪಟವರ್ಧನ ಅವರು ಮಾಹಿತಿ ಕೇಳಿದ್ದಾರೆ.

ಟೆಂಡರ್ ಕರೆದಿರುವುದು ಕರ್ನಾಟಕ ರಾಜ್ಯ ಸರ್ಕಾರವೇ ಅಥವಾ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಯೇ? ಟೆಂಡರ್ ಕರೆದ ಇಲಾಖೆಯ ಹೆಸರು, ಟೆಂಡರ್ ಸಂಖ್ಯೆ ಹಾಗೂ ಸಮೀಕ್ಷೆಗೆ ಹಣಕಾಸು ಒದಗಿಸುತ್ತಿರುವ ಸಂಸ್ಥೆಯ ವಿವರಗಳನ್ನು ಬಹಿರಂಗಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಹೆಚ್ಚುವರಿ ವೆಚ್ಚ, ಪರಿಸರ ಹಾನಿಯ ಹೊಣೆ ಯಾರಿಗೆ?

ಯೋಜನೆಯ ಅನುಷ್ಠಾನದ ವೇಳೆ ಅಂದಾಜಿಗಿಂತ ಹೆಚ್ಚಿನ ವೆಚ್ಚ ಉಂಟಾದರೆ, ಪರಿಸರದ ಮೇಲಿನ ದುಷ್ಪರಿಣಾಮಗಳನ್ನು ತಗ್ಗಿಸಲು ಹೆಚ್ಚುವರಿ ಹಣ ಬೇಕಾದರೆ ಅಥವಾ ಯೋಜನೆಯಿಂದ ಸಂತ್ರಸ್ತರಾಗುವವರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕಾದರೆ, ಆ ವೆಚ್ಚವನ್ನು ಯಾವ ಸರ್ಕಾರ ಅಥವಾ ಸಂಸ್ಥೆ ಭರಿಸಲಿದೆ ಎಂಬುದಕ್ಕೂ ಸ್ಪಷ್ಟನೆ ಕೋರಿದ್ದಾರೆ.

ಯೋಜನೆಯ ಹಣಕಾಸಿನ ಹೊಣೆಗಾರಿಕೆ ನಿರ್ಧರಿಸುವಾಗ ನಿರ್ಮಾಣ ವೆಚ್ಚವಷ್ಟೇ ಅಲ್ಲದೆ, ಪರಿಸರ ಸಂರಕ್ಷಣೆ, ಪರಿಹಾರ, ಪುನರ್ವಸತಿ ಮತ್ತು ದೀರ್ಘಕಾಲೀನ ನಿರ್ವಹಣೆಯ ವೆಚ್ಚಗಳನ್ನೂ ಪರಿಗಣಿಸಬೇಕೆಂಬುದು ಅವರ ಮನವಿಯ ಪ್ರಮುಖ ಅಂಶವಾಗಿದೆ.

ಬೇಸಿಗೆಯ ನದಿ ಹರಿವಿನ ದತ್ತಾಂಶಕ್ಕೆ ಒತ್ತು

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಮೂಲಕ ಹರಿಯುವ ಬೇಡ್ತಿ ನದಿಯ ನೀರನ್ನು ಬೇರೆಡೆಗೆ ವರ್ಗಾಯಿಸುವ ಯೋಜನೆಯ ಕುರಿತು ವೈಜ್ಞಾನಿಕ ಪರಿಶೀಲನೆಗೆ ಆದ್ಯತೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ವಿಶ್ವಾಸಾರ್ಹ ದೀರ್ಘಕಾಲೀನ ನದಿ ಹರಿವಿನ ದತ್ತಾಂಶ, ವಿಶೇಷವಾಗಿ ಬೇಸಿಗೆ ಕಾಲದ ನೀರಿನ ಹರಿವಿನ ಅಂಕಿಅಂಶಗಳನ್ನು ಸಂಗ್ರಹಿಸಿ ಸ್ವತಂತ್ರವಾಗಿ ಪರಿಶೀಲಿಸಿದ ನಂತರವೇ ಯೋಜನೆಗೆ ಹಣಕಾಸಿನ ಅನುಮೋದನೆ ಮತ್ತು ಅನುಷ್ಠಾನಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಜಲವೈಜ್ಞಾನಿಕ ಅಧ್ಯಯನಗಳು ಹಾಗೂ ಪರಿಸರ ಮೌಲ್ಯಮಾಪನಗಳ ಸ್ವತಂತ್ರ ಪರಿಶೀಲನೆ ಕಡ್ಡಾಯವಾಗಿದೆಯೇ ಎಂಬುದನ್ನೂ ತಿಳಿಸುವಂತೆ ಕೋರಿದ್ದಾರೆ.

ಸಮಗ್ರ ಅಧ್ಯಯನದ ಬಳಿಕವೇ ಯೋಜನೆ ಮುಂದುವರಿಯಲಿ

ಬೇಡ್ತಿ ನದಿಯ ಕೆಳಹರಿವಿನ ಪ್ರದೇಶಗಳಲ್ಲಿನ ನೀರಿನ ಲಭ್ಯತೆ, ಅರಣ್ಯ ಸಂಪತ್ತು, ಜೀವವೈವಿಧ್ಯ, ಪರಿಸರ ಸಮತೋಲನ ಹಾಗೂ ಸ್ಥಳೀಯ ಜನಸಮುದಾಯಗಳ ಹಿತಾಸಕ್ತಿಗಳನ್ನು ಸಮಗ್ರವಾಗಿ ಪರಿಗಣಿಸುವುದು ಅಗತ್ಯ ಎಂದು ಡಾ. ರವಿಕಿರಣ ಪಟವರ್ಧನ ಅಭಿಪ್ರಾಯಪಟ್ಟಿದ್ದಾರೆ.

ಸಾಕಷ್ಟು ವೈಜ್ಞಾನಿಕ ದತ್ತಾಂಶ ಲಭ್ಯವಾಗುವವರೆಗೆ, ಸಮಗ್ರ ಪರಿಸರ ಮೌಲ್ಯಮಾಪನ ಪೂರ್ಣಗೊಳ್ಳುವವರೆಗೆ ಹಾಗೂ ಹಣಕಾಸಿನ ಹೊಣೆಗಾರಿಕೆಗಳನ್ನು ಪಾರದರ್ಶಕವಾಗಿ ನಿರ್ಧರಿಸುವವರೆಗೆ ಅಗತ್ಯ ಅಧ್ಯಯನಗಳನ್ನು ಕೈಗೊಳ್ಳದೆ ಯೋಜನೆಯನ್ನು ಮುಂದುವರಿಸಬಾರದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಬೇಡ್ತಿ–ವರದಾ ಯೋಜನೆ ಕೇಂದ್ರ ಸರ್ಕಾರದ್ದೇ, ರಾಜ್ಯ ಸರ್ಕಾರದ್ದೇ ಅಥವಾ ಎರಡೂ ಸರ್ಕಾರಗಳ ಸಹಭಾಗಿತ್ವದಲ್ಲಿನ ಯೋಜನೆಯೇ? ಎಂಬ ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಲು ಕೇಂದ್ರ ಜಲಶಕ್ತಿ ಸಚಿವಾಲಯವು ಅಧಿಕೃತ ಲಿಖಿತ ಉತ್ತರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0