ಬೀದಿ ಗೂಳಿಗಳ ಕಾಳಗಕ್ಕೆ ಸಿಲುಕಿ ಪಾದಾಚಾರಿ ಮಹಿಳೆ ಸಾವು
ಕಾರವಾರ ತಾಲೂಕಿನ ಮಲ್ಲಾಪುರದಲ್ಲಿ ದುರಂತ; ಬೀದಿ ಗೂಳಿಗಳ ಹಾವಳಿ ನಿಯಂತ್ರಣಕ್ಕೆ ಸ್ಥಳೀಯರ ಆಗ್ರಹ
ಆಪ್ತ ನ್ಯೂಸ್ ಕಾರವಾರ:
ರಸ್ತೆಯಲ್ಲಿ ಕಾದಾಡುತ್ತಿದ್ದ ಎರಡು ಬೀದಿ ಗೂಳಿಗಳ ಕಾಳಗಕ್ಕೆ ಸಿಲುಕಿದ ಅಮಾಯಕ ಪಾದಾಚಾರಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಲ್ಲಾಪುರ ಗ್ರಾಮದ ನಿವಾಸಿ ರಾಜೇಶ್ವರಿ (29) ಎಂದು ಗುರುತಿಸಲಾಗಿದೆ.
ರಾಜೇಶ್ವರಿ ಅವರು ಕೆಲಸ ಮುಗಿಸಿಕೊಂಡು ಎಂದಿನಂತೆ ಮನೆಗೆ ಮರಳುತ್ತಿದ್ದ ವೇಳೆ ಗ್ರಾಮದ ಸುಭದ್ರಾ ಹೋಟೆಲ್ ಸಮೀಪದ ರಸ್ತೆಯಲ್ಲಿ ಎರಡು ಗೂಳಿಗಳು ಏಕಾಏಕಿ ಕಾದಾಡುತ್ತಿದ್ದವು ಎನ್ನಲಾಗಿದೆ. ಗೂಳಿಗಳ ಕಾಳಗದಿಂದ ದೂರ ಸರಿದು ಸಾಗುತ್ತಿದ್ದ ವೇಳೆ, ಕ್ಷಣಾರ್ಧದಲ್ಲಿ ಗೂಳಿಗಳು ರಭಸವಾಗಿ ಅವರತ್ತ ನುಗ್ಗಿವೆ. ಗೂಳಿಗಳ ಗುದ್ದಾಟಕ್ಕೆ ಸಿಲುಕಿದ ರಾಜೇಶ್ವರಿ ಅವರು ಆಯತಪ್ಪಿ ರಸ್ತೆಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದರು.
ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ ಗಾಯಾಳು ರಾಜೇಶ್ವರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆಯಲ್ಲಿ ಗೂಳಿಗಳ ಕಾಳಗ, ಆತಂಕದಲ್ಲಿ ಸಾರ್ವಜನಿಕರು
ಮಲ್ಲಾಪುರ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ಗೂಳಿಗಳ ಹಾವಳಿ ಸಾರ್ವಜನಿಕರಿಗೆ ಆತಂಕ ಮೂಡಿಸುತ್ತಿದೆ. ರಸ್ತೆಯಲ್ಲೇ ಗೂಳಿಗಳು ಕಾದಾಡುವುದು, ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುವುದು ಹಾಗೂ ಪಾದಚಾರಿಗಳ ಮೇಲೆ ಏಕಾಏಕಿ ದಾಳಿ ನಡೆಸುವಂತಹ ಘಟನೆಗಳು ನಡೆಯುತ್ತಿವೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಇದೀಗ ರಾಜೇಶ್ವರಿ ಅವರ ದುರಂತ ಸಾವು ಬೀದಿ ಗೂಳಿಗಳ ನಿಯಂತ್ರಣದ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಜನರ ಸುರಕ್ಷತೆಗೆ ಅಪಾಯವಾಗುವ ಮುನ್ನ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳು ಬೀದಿ ಗೂಳಿಗಳ ಹಾವಳಿ ನಿಯಂತ್ರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಯುವತಿಯೊಬ್ಬರ ದಾರುಣ ಸಾವು ಕುಟುಂಬಸ್ಥರಲ್ಲಿ ಹಾಗೂ ಗ್ರಾಮಸ್ಥರಲ್ಲಿ ತೀವ್ರ ನೋವು ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



