ರೈಸ್ ಮಿಲ್‌ನಲ್ಲಿ ಬೃಹತ್ ನಾಗರ ಹಾವು ಪ್ರತ್ಯಕ್ಷ: ಸಕಾಲಕ್ಕೆ ಆಗಮಿಸಿ ರಕ್ಷಿಸಿದ ಸುನೀಲ್ ಹೊನ್ನಾವರ
ಆಪ್ತ ನ್ಯೂಸ್ ಮುಂಡಗೋಡ:
ತಾಲೂಕಿನ ಕಾತೂರು ವಲಯದ ಪಾಳಾ ಶಾಖೆಯ ವ್ಯಾಪ್ತಿಯ ಪಾಳಾ ಗ್ರಾಮದ ಮಹಾಲಕ್ಷ್ಮೀ ರೈಸ್ ಮಿಲ್‌ನಲ್ಲಿ ಗುರುವಾರ ಬೃಹತ್ ಗಾತ್ರದ ನಾಗರ ಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುವುದರಿಂದ ಯಾವುದೇ ಅನಾಹುತ ಸಂಭವಿಸದೆ ತಪ್ಪಿದೆ.
ಪಾಳಾ ಗ್ರಾಮದ ನಿವಾಸಿ ಪಾಂಡುರಂಗ ಹುಲೇಕಲ್ ಅವರಿಗೆ ಸೇರಿದ ಮಹಾಲಕ್ಷ್ಮೀ ರೈಸ್ ಮಿಲ್‌ನಲ್ಲಿ ದಾಸ್ತಾನು ಮಾಡಲಾಗಿದ್ದ ಅಕ್ಕಿ ಚೀಲಗಳ ಕೆಳಭಾಗದಲ್ಲಿ ಬೃಹತ್ ಗಾತ್ರದ ನಾಗರ ಹಾವು ಇರುವುದನ್ನು ಮಿಲ್ ಸಿಬ್ಬಂದಿ ಗಮನಿಸಿದ್ದಾರೆ. ಹಾವು ಕಂಡ ತಕ್ಷಣ ರೈಸ್ ಮಿಲ್‌ನ ಕ್ಲರ್ಕ್ ಅಶೋಕ ಗೌಡರ್ ಅವರು ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಮಾಹಿತಿ ದೊರಕುತ್ತಿದ್ದಂತೆಯೇ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ಅರಣ್ಯ ವೀಕ್ಷಕ ಬಸವರಾಜ್ ಎನ್. ವಾಲ್ಮೀಕಿ ಅವರ ಸಹಕಾರದೊಂದಿಗೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ ನಾಗರ ಹಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸೆರೆಹಿಡಿದರು.
ರಕ್ಷಿಸಲಾದ ನಾಗರ ಹಾವನ್ನು ಬಳಿಕ ಅದರ ಸಹಜ ವಾಸಸ್ಥಳವಾದ ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು. ಈ ಮೂಲಕ ಹಾವಿಗೂ ಯಾವುದೇ ಅಪಾಯವಾಗದಂತೆ ಹಾಗೂ ರೈಸ್ ಮಿಲ್‌ನಲ್ಲಿದ್ದ ಕಾರ್ಮಿಕರು ಮತ್ತು ರೈತರ ಸುರಕ್ಷತೆಯನ್ನೂ ಖಾತ್ರಿಪಡಿಸಲಾಯಿತು.
ಘಟನೆಯ ವೇಳೆ ರೈಸ್ ಮಿಲ್‌ನ ಲಾರಿ ಚಾಲಕ, ಕೆಲಸಗಾರರು ಹಾಗೂ ಅಕ್ಕಿ ಸಾಗಣೆಗಾಗಿ ಬಂದಿದ್ದ ರೈತರು ಸ್ಥಳದಲ್ಲಿದ್ದು, ಬೃಹತ್ ನಾಗರ ಹಾವಿನ ರಕ್ಷಣಾ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ವನ್ಯಜೀವಿ ಸಂರಕ್ಷಣೆಯ ಬದ್ಧತೆಯನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಸಾರ್ವಜನಿಕರಿಗೆ ಹಾವು ಕಂಡುಬಂದರೆ ಅದನ್ನು ಕೊಲ್ಲಲು ಅಥವಾ ಹಿಡಿಯಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ವನ್ಯಜೀವಿಗಳನ್ನು ರಕ್ಷಿಸುವುದರೊಂದಿಗೆ ಮಾನವ ಜೀವಗಳ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದ್ದು, ಇಂತಹ ಸಂದರ್ಭಗಳಲ್ಲಿ ಪರಿಣಿತರ ನೆರವು ಪಡೆಯುವುದು ಅತ್ಯಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



