ಅಬ್ಬರದ ಮಳೆ: ಶಿರಸಿ ನಗರದ ಜನವಸತಿ ಪ್ರದೇಶಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

Aug 2, 2026 - 10:49
 0  134
ಅಬ್ಬರದ ಮಳೆ: ಶಿರಸಿ ನಗರದ ಜನವಸತಿ ಪ್ರದೇಶಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

ಆಪ್ತ ನ್ಯೂಸ್ ಶಿರಸಿ:

ಕಳೆದ ಎರಡು ದಿನಗಳಿಂದ ಶಿರಸಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಹಲವು ಬಡಾವಣೆಗಳ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ನಗರದ ಚೌಡೇಶ್ವರಿ ನಗರ, ಶ್ರೀಧರ ನಗರ, ಟಿಎಸ್‌ಎಸ್‌ ರಸ್ತೆಯ ಚಂದ್ರಾ ಕಾಲೋನಿ, ಹುಬ್ಬಳ್ಳಿ ರಸ್ತೆಯ ಮಂಜು ಹೋಟೆಲ್ ಹಿಂಭಾಗ, ಲಯನ್ಸ್ ನಗರ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ಮನೆಗಳ ಸುತ್ತಮುತ್ತ ಹಾಗೂ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೂ ತೊಂದರೆ ಉಂಟಾಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿರುವ ಕಾರಣ ನಿವಾಸಿಗಳು ಅಗತ್ಯ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರೀ ಮಳೆಯ ಪರಿಣಾಮ ಯಲ್ಲಾಪುರ ರಸ್ತೆಯ ಮಹಾಸತಿ ಸರ್ಕಲ್ ಬಳಿ ಧರೆ ಕುಸಿತ ಸಂಭವಿಸಿದ್ದು, ಈ ಭಾಗದಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ. ಮತ್ತೊಂದೆಡೆ ನಗರದ ಐತಿಹಾಸಿಕ ಕೋಟೆಕೆರೆ ಸಂಪೂರ್ಣ ತುಂಬಿ ಉಕ್ಕಿ ಹರಿಯುತ್ತಿದ್ದು, ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡುಬಂದಿದೆ.

ಜಿಲ್ಲೆಯಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಿದ್ರಳ್ಳಿ ಹೊಳೆ, ಶಾಲ್ಮಲಾ ನದಿ, ಕೆಂಗ್ರೆಹೊಳೆ ಹಾಗೂ ಪಟ್ಟಣದ ಹೊಳೆಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ನದಿ ಮತ್ತು ಹೊಳೆಗಳ ತೀರ ಪ್ರದೇಶದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಿರಂತರ ಮಳೆಯಿಂದ ರಸ್ತೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ದೈನಂದಿನ ಕೆಲಸಗಳಿಗೆ ತೆರಳುವ ಸಾರ್ವಜನಿಕರು ಪರದಾಡುವಂತಾಗಿದೆ. ಹವಾಮಾನ ಇಲಾಖೆ ಇನ್ನೂ ಮಳೆಯ ಸಾಧ್ಯತೆಯನ್ನು ಸೂಚಿಸಿರುವ ಹಿನ್ನೆಲೆಯಲ್ಲಿ ನಗರ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಆಡಳಿತ ಸೂಚನೆ ನೀಡಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0