ಸಿಡಿಲಬ್ಬರದ ಆರ್ಭಟ: ಹಳಿಯಾಳದಲ್ಲಿ ಘೋರ ದುರಂತ, ಮೂರು ಜಾನುವಾರುಗಳು ಬಲಿ; ಶಾಲೆಯ ಮೇಲ್ಚಾವಣಿ ಫೀಸ್ ಫೀಸ್!
ಆಪ್ತ ನ್ಯೂಸ್ ಹಳಿಯಾಳ:
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಪ್ರಕೃತಿ ಮುನಿಸಿಗೆ ಭೀಕರ ದುರಂತವೊಂದು ಸಂಭವಿಸಿದೆ. ತಾಲೂಕಿನ ಮಂಗಳವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಹಠಾತ್ತನೆ ಎದ್ದ ಭಾರೀ ಗಾಳಿಮಳೆ ಹಾಗೂ ಭೀಕರ ಸಿಡಿಲಿನ ಆರ್ಭಟಕ್ಕೆ ಮೂರು ಜಾನುವಾರುಗಳು ಜಾಗದಲ್ಲೇ ಜೀವ ಬಿಟ್ಟಿದ್ದು, ಇಡೀ ಗ್ರಾಮವೇ ಬೆಚ್ಚಿಬೀಳುವಂತೆ ಮಾಡಿದೆ.
ಜಾಗದಲ್ಲೇ ಉಸಿರು ಚೆಲ್ಲಿದ ಮೂಕಪ್ರಾಣಿಗಳು!
ಭಾನುವಾರ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಆಕಾಶ ಸಂಪೂರ್ಣ ಕಪ್ಪಿಟ್ಟುಕೊಂಡು, ನೋಡನೋಡುತ್ತಿದ್ದಂತೆಯೇ ಸಿಡಿಲಬ್ಬರ ಶುರುವಾಗಿದೆ. ಈ ವೇಳೆ ಮಂಗಳವಾಡದ ರೋಮನ್ ಬಾವಟಿಸ್ ದಾಲ್ಮೆತ್ ಎಂಬುವವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಹಸು ಸಿಡಿಲಿನ ತೀವ್ರತೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿವೆ. ನೆಚ್ಚಿನ ಜಾನುವಾರುಗಳನ್ನು ಕಳೆದುಕೊಂಡ ರೈತ ಕುಟುಂಬ ಕಣ್ಣೀರಿಡುತ್ತಿದ್ದು, ಪಶುಸಂಗೋಪನೆಯನ್ನೇ ನಂಬಿ ಬದುಕುತ್ತಿದ್ದ ಈ ಬಡ ಕುಟುಂಬಕ್ಕೆ ಲಕ್ಷಾಂತರ ರೂಪಾಯಿಗಳ ಆರ್ಥಿಕ ನಷ್ಟ ಉಂಟಾಗಿದೆ.
ಹಾರಿದ ಶಾಲೆಯ ಮೇಲ್ಚಾವಣಿ!
ಗಾಳಿಯ ವೇಗ ಎಷ್ಟಿತ್ತೆಂದರೆ ಮಂಗಳವಾಡ ಪ್ರೌಢಶಾಲೆಯ ಮೇಲ್ಚಾವಣಿಯ ಶೀಟುಗಳು ಗಾಳಿಯಲ್ಲಿ ತರಗೆಲೆಯಂತೆ ಹಾರಿಹೋಗಿದ್ದು, ಇಡೀ ಶಾಲಾ ಕಟ್ಟಡಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಅದೃಷ್ಟವಶಾತ್ ಭಾನುವಾರ ರಜಾದಿನವಾಗಿದ್ದರಿಂದ ಶಾಲೆಯಲ್ಲಿ ಮಕ್ಕಳಿರಲಿಲ್ಲ, ಇಲ್ಲದಿದ್ದರೆ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಘಟನೆ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯತ್ ಮೂಲಗಳು ಶಿಕ್ಷಣ ಇಲಾಖೆಯ ಬಿಇಒ (ಕ್ಷೇತ್ರ ಶಿಕ್ಷಣಾಧಿಕಾರಿಗಳು) ಗಮನಕ್ಕೆ ತಂದು ತುರ್ತು ಕ್ರಮಕ್ಕೆ ಆಗ್ರಹಿಸಿವೆ.
ಗ್ರಾಮದಲ್ಲಿ ಆತಂಕ: ಸೂಕ್ತ ಪರಿಹಾರಕ್ಕೆ ಆಗ್ರಹ
ಅನಿರೀಕ್ಷಿತವಾಗಿ ಬಂದೆರಗಿದ ಈ ಚಂಡಮಾರುತದಂತಹ ಗಾಳಿಮಳೆ ಹಾಗೂ ಸಿಡಿಲಿನ ಅಬ್ಬರದಿಂದ ಮಂಗಳವಾಡ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ದಿಕ್ಕುತೋಚದಂತಾಗಿರುವ ಸಂತ್ರಸ್ತ ರೈತ ಕುಟುಂಬಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣವೇ ಧಾವಿಸಿ, ಸೂಕ್ತವಾದ ಪರಿಹಾರ ನೀಡಬೇಕು ಎಂದು ಸ್ಥಳೀಯರು ಹಾಗೂ ಗ್ರಾಮಸ್ಥರು ಸರ್ಕಾರಕ್ಕೆ ತೀವ್ರ ಒತ್ತಾಯ ಹೇರಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
2
Wow
0



