ಯಲ್ಲಾಪುರ ಮಾರ್ಕೆಟಿಂಗ್‌ ಸೊಸೈಟಿ ಸದಸ್ಯರ ಹಕ್ಕು ಹತ್ತಿಕ್ಕುವ ರಾಜಕೀಯ ಷಡ್ಯಂತ್ರದ ವಿರುದ್ಧ ಧರಣಿ

Mar 11, 2026 - 22:08
 0  85
ಯಲ್ಲಾಪುರ ಮಾರ್ಕೆಟಿಂಗ್‌ ಸೊಸೈಟಿ ಸದಸ್ಯರ ಹಕ್ಕು ಹತ್ತಿಕ್ಕುವ ರಾಜಕೀಯ ಷಡ್ಯಂತ್ರದ ವಿರುದ್ಧ ಧರಣಿ

ಆಪ್ತ ನ್ಯೂಸ್‌ ಯಲ್ಲಾಪುರ:

    ಇಲ್ಲಿಯ  ಮಾರ್ಕೆಟಿಂಗ್ ಸೊಸೈಟಿಯ ಸದಸ್ಯರ ಹಕ್ಕನ್ನು ಹತ್ತಿಕ್ಕುತ್ತಿರುವ ರಾಜಕೀಯ ಷಡ್ಯಂತ್ರ ಹಾಗೂ ಕಾನೂನು ಮೀರಿ ಕಾರ್ಯ ನಿರ್ವಹಿಸುತ್ತಿರುವ ಆಡಳಿತಾಧಿಕಾರಿಯು ಬೇರೆಯವರ ಎಜೆಂಟರಾಗಿಕೆಲಸ ನಿರ್ವಹಿಸುತ್ತಿರುವುದನ್ನು ಖಂಡಿಸಿ ಟಿಎಂಎಸ್ ಉಳಿಸಿ ಹೊರಾಟ ಸಮಿತಿಯಿಂದ ಟಿಎಂಎಸ್ ಆವಾರದಲ್ಲಿ ಬುಧವಾರ ಧರಣಿ ನಡೆಯಿತು.
    ಟಿಎಂಎಸ್ ಮಾಜಿ ಅಧ್ಯಕ್ಷ ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸಂಸ್ಥೆಯ ಸಹಸ್ರಾರು ಸದಸ್ಯರ ಅಧಿಕಾರ ಮೊಟಕುಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಷಡ್ಯಂತ್ರ ನಡೆಸುತ್ತಿದ್ದಾರೆ. ಸಂಸ್ಥೆಯ ಉಳಿವಿಗಾಗಿ ನಾವು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು. ನಮ್ಮ‌ಪರವಾಗಿ ನ್ಯಾಯಾಲಯದ ತೀರ್ಪು ಬರುವ ಹೊತ್ತಿಗೆ ಸಂಸ್ಥೆಗೆ ಮಾರಕವಾಗುವ ನಿರ್ಧಾರವನ್ನು ಆಡಳಿತಾಧಿಕಾರಿಗಳು ಕೈಗೊಳ್ಳಲು ಮುಂದಾಗಿರುವುದು ನೋಡಿದರೆ ಇವರು ಅಧಿಕಾರಿಯೋ ಅಥವಾ ರಾಜಕಾರಣಿಗಳ ಕೈಗೊಂಬೆಯೋ  ಎಂದು ಪ್ರಶ್ನಿಸಿದರು.
     ಸಂಸ್ಥೆಯ, ಸದಸ್ಯರ ಹಿತಕ್ಕಾಗಿ ಹೋರಾಟ  ಮುಂದುವರಿಯಲಿದೆ. ಸ್ಪಂದನೆ ದೊರೆಯದೇ ಹೋದರೆ ರಸ್ತೆ ತಡೆ ನಡೆಸಲಿದ್ದೇವೆ. ಆಗಲೂ ಯಾವುದೇ ಕ್ರಮ ಆಗದೇ ಇದ್ದಲ್ಲಿ ಸಂಸ್ಥೆಯ ಎದುರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತೇನೆ. ಉಪವಾಸದಿಂದ ನಾನು ಸತ್ತರೆ ತಾಲೂಕಿನ ರೈತರ ಹಿತಕ್ಕಾಗಿ ಬಲಿಯಾದ ನೆಮ್ಮದಿ ನನಗೆ ದೊರೆಯುತ್ತದೆ ಎಂದರು.
     ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ,ರೈತರ ಜೀವನಾಡಿಯಾದ ಸಂಸ್ಥೆಯನ್ನು ಅವ್ಯವಸ್ಥೆಯ ಆಗರವಾಗಿಸಲು ಸಂಸ್ಥೆಯ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಸಿ.ಎಸ್ ಹೆಗಡೆ ಹಾಗೂ ಶಾಸಕರೇ ಕಾರಣ ಎಂದು ಆರೋಪಿಸಿದರು.
    ನ್ಯಾಯಾಲಯದಲ್ಲಿ ತೀರ್ಪು ಬಂದು ಅಗ್ಗಾಶಿಕುಂಬ್ರಿ ನೇತೃತ್ವದ ತಂಡ ಅಧಿಕಾರಕ್ಕೆ ಬರುತ್ತದೆ ಎಂಬ ಆತಂಕದಿಂದ ಷಡ್ಯಂತ್ರ ಮಾಡುತ್ತಿದ್ದಾರೆ. ಎಷ್ಟೇ ಕಷ್ಟಗಳು ಎದುರಾದರೂ ಸಂಸ್ಥೆಯ ಉಳಿವಿಗೆ ಹೋರಾಟ ಮುಂದುವರಿಸುತ್ತೇವೆ. ಸಹಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಬಂದು ಆಡಳಿತಾಧಿಕಾರಿ ನೇಮಕ ಹಿಂಪಡೆಯಬೇಕು, ನ್ಯಾಯಾಲಯದ ಮೊಕದ್ದಮೆ ಹಿಂಪಡೆಯುವ ಠರಾವನ್ನು ವಾಪಸ್ ಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
     ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ,ರೈತರ ಹಿತಕ್ಕಾಗಿ ಸಹಕಾರಿ ಸಂಸ್ಥೆಯನ್ನು ಸರಿದೂಗಿಸಿಕೊಂಡು ಹೋಗಬೇಕಾದ ಶಾಸಕ ಹೆಬ್ಬಾರರೇ ವಿಷಕಂಠನಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಧುರಿಣ ಪ್ರಮೋದ ಹೆಗಡೆ ಮಾತನಾಡಿ, ಆಡಳಿತಾಧಿಕಾರಿ ಲಂಚದ ಹಣಕ್ಕಾಗಿ ಕೆಲಸ ಮಾಡಲು ಬಂದಿದ್ದಾರೆ. ತನ್ನ ಕರ್ತವ್ಯದ ಮಿತಿ ಮೀರಿ ಕಾರ್ಯ ನಿರ್ವಹಿಸುತ್ತಿರುವ ಅವರು ಶಿಕ್ಷೆಗೆ ಗುರಿಯಾಗುವುದು ಖಂಡಿತ ಎಂದು ಎಚ್ಚರಿಸಿದರು. ರೈತರು ಅನ್ಯಾಯದ ವಿರುದ್ಧ ಎದ್ದು ನಿಂತಾಗ ರೈತರೇ ಗೆಲ್ಲುತ್ತಾರೆ ವಿನಃ ಭ್ರಷ್ಟ ಹಣಕ್ಕೆ ಜಯ ಸಿಗುವುದಿಲ್ಲ ಎಂದರು. 
    ಸಂಸ್ಥೆಯ ಮಾಜಿ ನಿರ್ದೇಶಕರಾದ ವೆಂಕಟರಮಣ ಬೆಳ್ಳಿ, ಸುಬ್ಬಣ್ಣ ಬೋಳ್ಮನೆ,ಹಿರಿಯರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಇತರರು ಮಾತನಾಡಿ ಆಡಳಿತಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

**********

ಹತ್ತು ವರ್ಷಗಳ ಕಾಲ ಯಲ್ಲಾಪುರ ತಾಲೂಕಿನ ಹೆಮ್ಮೆಯ ಸಹಕಾರಿ ಸಂಸ್ಥೆ ಟಿಎಂಎಸ್ ನೇತೃತ್ವ ವಹಿಸಿ ಜನಪರ ಮತ್ತು ಪಾರದರ್ಶಕ ಆಡಳಿತ ನೀಡಿದ ನಾರಾಯಣ ಭಟ್,ಅಗ್ಗಾಶಿಕುಂಬ್ರಿ ಮತ್ತು ಅವರ ಆಡಳಿತ ತಂಡವನ್ನು ನೇರ ಚುನಾವಣೆಯಲ್ಲಿ ಮಣಿಸಲಾಗದ ತಾಲೂಕಿನ ಪಟ್ಟಭದ್ರ ಹಿತಾಸಕ್ತಿಗಳು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹವಣಿಸುತ್ತಿದೆ.ಅಧಿಕಾರ ದುರ್ಬಳಕೆಯಿಂದ ನೇಮಕಗೊಂಡ ಆಡಳಿತಾಧಿಕಾರಿ ಸಂಸ್ಥೆಯ ಸಹಸ್ರಾರು ಸದಸ್ಯರ ಹಕ್ಕು ಮೊಟಕುಗೊಳಿಸಿ ಬೇಕಾಬಿಟ್ಟಿ ತೀರ್ಮಾನಗಳನ್ನು ತೆಗೆದುಕೊಂಡು ಸಂಸ್ಥೆಯ ಹಿತಕ್ಕೆ ವಿರುದ್ಧವಾಗಿ ಕಾರ್ಯ ನಿರ್ವಹಿಸಿದ ಟಿಎಂಎಸ್ ಆಡಳಿತಾಧಿಕಾರಿ ಭಾಸ್ಕರ ನಾಯ್ಕ್ ಅವರನ್ನು ವಜಾ ಮಾಡಬೇಕು,ಅಕ್ರಮವಾಗಿ  ಪಾಸು ಮಾಡಿರುವ ಠರಾವು ಹಿಂಪಡೆಯಬೇಕು ಎಂದು ಆಗ್ರಹಿಸಿ ಮಾ ೧೧ ರಂದು ಒಂದು ದಿನದ ಧರಣಿ ನಡೆಸಿದರೂ ಸಹ ಸಂಬಂಧಪಟ್ಟ ಮೇಲಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮಾ ೧೨ ರಂದು ಬೆಳಿಗ್ಗೆ ೧೦.೩೦ ಕ್ಕೆ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ತಾಲೂಕಿನ ರೈತರು ಮತ್ತು ಸಹಕಾರಿ ಸದಸ್ಯರು ರಸ್ತೆ ತಡೆ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಟಿಎಂಎಸ್ ಉಳಿಸಿ ಹೋರಾಟ ಸಮಿತಿಯ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0