~ಆದಿತ್ಯ ನಾರಾಯಣ್
***********
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (POK) ಭಾರತಕ್ಕೆ ಮರಳಿ ಸೇರಿಸಿಕೊಳ್ಳುವುದು ಕೇವಲ ರಾಜಕೀಯ ಭಾಷಣಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅದಕ್ಕಾಗಿ ಸಂವಿಧಾನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ಭದ್ರವಾದ ಬುನಾದಿಯನ್ನು ಹಾಕುವ ಕೆಲಸ ಈಗಾಗಲೇ ಶುರುವಾಗಿದೆ. ಸಂಸತ್ತಿನಲ್ಲಿ ಮಂಡನೆಯಾಗಿರುವ ಹೊಸ ಡಿಲಿಮಿಟೇಶನ್ ಬಿಲ್ (ಕ್ಷೇತ್ರ ಮರುವಿಂಗಡಣಾ ಮಸೂದೆ) ಮೂಲಕ ಗೃಹ ಸಚಿವ ಅಮಿತ್ ಶಾ ಅವರು ಹೆಣೆದಿರುವ ಈ 'ಮಾಸ್ಟರ್ ಸ್ಟ್ರೋಕ್' ಇದೀಗ ನೆರೆಯ ಪಾಕಿಸ್ತಾನದ ಎದೆಯಲ್ಲಿ ಅಕ್ಷರಶಃ ನಡುಕ ಹುಟ್ಟಿಸಿದೆ. ಈ ಮಸೂದೆಯು ಕೇವಲ ಭಾರತದೊಳಗಿನ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಭವಿಷ್ಯದಲ್ಲಿ POK ಮರಳಿ ಭಾರತದ ತೆಕ್ಕೆಗೆ ಬಂದ ತಕ್ಷಣ ಅಲ್ಲಿ ಚುನಾವಣೆ ನಡೆಸಿ ಪ್ರಜಾಪ್ರಭುತ್ವವನ್ನು ಹೇಗೆ ಸ್ಥಾಪಿಸಬೇಕು ಎನ್ನುವುದರ ಮೊದಲ ಹಂತದ ತಯಾರಿಯಾಗಿದೆ ಎನ್ನುವುದು ರಾವಲ್ಪಿಂಡಿಯ ನಿದ್ದೆಗೆಡಿಸಿದೆ.
ಈ ಹೊಸ ಮಸೂದೆಯಲ್ಲಿ ಅಂತಹದ್ದೇನಿದೆ ಎಂದು ನೋಡುವುದಾದರೆ, ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (POK) 24 ಸೀಟುಗಳನ್ನು ಮೀಸಲಿಡಲಾಗಿದೆ. ಪ್ರಸ್ತುತ POK ಪಾಕಿಸ್ತಾನದ ಅಕ್ರಮ ವಶದಲ್ಲಿರುವುದರಿಂದ ಅಲ್ಲಿ ಚುನಾವಣೆ ನಡೆಯುತ್ತಿಲ್ಲ. ಆದರೆ, ಭಾರತ ಸರ್ಕಾರ ಈಗ ಭವಿಷ್ಯದ ದೃಷ್ಟಿಯಿಂದ ಕಾನೂನಾತ್ಮಕ ಚೌಕಟ್ಟೊಂದನ್ನು ಸಿದ್ಧಪಡಿಸುತ್ತಿದೆ. ಅಂದರೆ, ನಾಳೆ POK ಭಾರತದ ವಶಕ್ಕೆ ಬಂದ ಮರುಕ್ಷಣವೇ ಅಲ್ಲಿ ಚುನಾವಣೆ ನಡೆಸಲು ಮತ್ತೆ ಸಂಸತ್ತಿನಲ್ಲಿ ಯಾವುದೇ ಹೊಸ ಬಿಲ್ ಪಾಸ್ ಮಾಡುವ ಅಗತ್ಯವಿರುವುದಿಲ್ಲ. ಈಗಲೇ ಡಿಲಿಮಿಟೇಶನ್ ಮೂಲಕ ಕ್ಷೇತ್ರಗಳನ್ನು ಗುರುತಿಸಿ, ಸೀಟುಗಳನ್ನು ನಿಗದಿಪಡಿಸಿಡಲಾಗಿದೆ. POK ನಮ್ಮ ಕೈಸೇರಿದ ತಕ್ಷಣವೇ ಅಲ್ಲಿ ನೇರವಾಗಿ ಎಲೆಕ್ಷನ್ ನಡೆಸಿ, ಅಲ್ಲಿನ ಜನರಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡುವ ಸ್ಪಷ್ಟವಾದ ನೀಲನಕ್ಷೆಯನ್ನು ಭಾರತ ಜಗತ್ತಿನ ಮುಂದಿಟ್ಟಿದೆ.
ಇದು POK ಯಾವುದೇ ವಿವಾದಿತ ಪ್ರದೇಶವಲ್ಲ, ಅದು ಭಾರತದ ಅವಿಭಾಜ್ಯ ಅಂಗ ಎಂಬ ಕಠಿಣ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದೆ.ಭಾರತದ ಈ ಭವಿಷ್ಯದ ರಣತಂತ್ರ ಅರಿವಾಗುತ್ತಿದ್ದಂತೆ ಇತ್ತ ಪಾಕಿಸ್ತಾನಕ್ಕೆ ವಿಪರೀತ ಹೊಟ್ಟೆಯುರಿ ಶುರುವಾಗಿದೆ. ಮಸೂದೆ ಮಂಡನೆಯಾದ ತಕ್ಷಣವೇ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರು ತರಾತುರಿಯಲ್ಲಿ ಮಾಧ್ಯಮಗಳ ಮುಂದೆ ಬಂದು, ಭಾರತದ ಈ ನಡೆಯನ್ನು 'ಅಕ್ರಮ' ಎಂದು ಬೊಬ್ಬೆ ಹೊಡೆದಿದ್ದಾರೆ. ಭಾರತಕ್ಕೆ POK ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ, ಅದು ವಿವಾದಿತ ಪ್ರದೇಶ ಎಂದು ತಮ್ಮ ಹಳೆಯ ರಾಗವನ್ನೇ ಹಾಡಿದ್ದಾರೆ. ಆದರೆ, ಜಮ್ಮು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು 1947ರಲ್ಲೇ 'ಇನ್ಸ್ಟ್ರುಮೆಂಟ್ ಆಫ್ ಆಕ್ಸೆಷನ್' ಮೂಲಕ ಇಡೀ ಜಮ್ಮು ಕಾಶ್ಮೀರವನ್ನು (POK ಸೇರಿ) ಅಧಿಕೃತವಾಗಿ ಭಾರತದೊಂದಿಗೆ ವಿಲೀನಗೊಳಿಸಿದ್ದಾರೆ ಎಂಬ ಐತಿಹಾಸಿಕ ಸತ್ಯವನ್ನು ಪಾಕಿಸ್ತಾನ ಮುಚ್ಚಿಡಲು ಯತ್ನಿಸುತ್ತಿದೆ. ಭಾರತದ ಇತರೆ 550ಕ್ಕೂ ಹೆಚ್ಚು ಸಂಸ್ಥಾನಗಳು ಭಾರತದೊಂದಿಗೆ ವಿಲೀನವಾದಾಗ ಅದೇ ನಿಯಮ ಅನ್ವಯವಾಗುವುದಾದರೆ, ಕಾಶ್ಮೀರಕ್ಕೂ ಅದೇ ನಿಯಮ ಅನ್ವಯವಾಗುತ್ತದೆ ಎನ್ನುವ ಕಾನೂನಾತ್ಮಕ ಸತ್ಯ ಪಾಕಿಸ್ತಾನಕ್ಕೂ ಚೆನ್ನಾಗಿ ತಿಳಿದಿದೆ.
ಇನ್ನು ವಿಶ್ವಸಂಸ್ಥೆಯ (UN) ಭದ್ರತಾ ಮಂಡಳಿಯ ನಿರ್ಣಯದ ಬಗ್ಗೆ ಮಾತನಾಡುವ ಪಾಕಿಸ್ತಾನ, ಅಂದು ವಿಶ್ವಸಂಸ್ಥೆ ವಿಧಿಸಿದ್ದ ಮೊದಲ ಷರತ್ತನ್ನೇ ಉಲ್ಲಂಘಿಸಿದೆ. ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ಮುನ್ನ ಪಾಕಿಸ್ತಾನ ತನ್ನ ಸೇನೆಯನ್ನು POK ಯಿಂದ ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬುದು ವಿಶ್ವಸಂಸ್ಥೆಯ ಆದೇಶವಾಗಿತ್ತು. ಆದರೆ ಪಾಕಿಸ್ತಾನ ತನ್ನ ಸೇನೆಯನ್ನು ಹಿಂಪಡೆಯುವ ಬದಲು, ಅಲ್ಲಿನ ಮೂಲ ಕಾಶ್ಮೀರಿಗಳನ್ನು ಮತ್ತು ಶಿಯಾ ಮುಸ್ಲಿಮರನ್ನು ಓಡಿಸಿ, ಪಂಜಾಬಿಗಳನ್ನು ಅಲ್ಲಿಗೆ ತುಂಬಿ ಇಡೀ ಪ್ರದೇಶದ ಜನಸಂಖ್ಯೆಯ ಚಿತ್ರಣವನ್ನೇ ಬದಲಾಯಿಸಿದೆ. ಈಗ ಬಲವಂತವಾಗಿ ಆಕ್ರಮಿಸಿಕೊಂಡಿರುವ ಪಾಕಿಸ್ತಾನಕ್ಕೆ ಭಾರತದ ಕಾನೂನುಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಒಟ್ಟಾರೆಯಾಗಿ, POK ಕೇವಲ ಭಾಷಣದ ಸರಕಾಗಿ ಉಳಿಯದೆ, ಪಾಕಿಸ್ತಾನ ಸೃಷ್ಟಿಸಿರುವ ಆ ಕಾನೂನುಬಾಹಿರ ಕಾಡಿನಲ್ಲಿ ಪ್ರಜಾಪ್ರಭುತ್ವದ ಕಮಲವನ್ನು ಅರಳಿಸುವ ಐತಿಹಾಸಿಕ ಪ್ರಕ್ರಿಯೆಗೆ ಅಮಿತ್ ಶಾ ಅವರು ಈ ಡಿಲಿಮಿಟೇಶನ್ ಬಿಲ್ ಮೂಲಕ ಅತ್ಯಂತ ಭದ್ರವಾದ ಅಡಿಪಾಯ ಹಾಕಿದ್ದಾರೆ.