ಆದಿತ್ಯ ನಾರಾಯಣ್
*****
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ಆಧುನಿಕ ಯುದ್ಧತಂತ್ರದ ದಿಕ್ಕನ್ನೇ ಬದಲಾಯಿಸಿದ್ದು, ಬಾಹ್ಯಾಕಾಶ ಮತ್ತು ಉಪಗ್ರಹ ಆಧಾರಿತ ಗುಪ್ತಚರ ವ್ಯವಸ್ಥೆಯು ಯುದ್ಧದ ಭವಿಷ್ಯವನ್ನು ಹೇಗೆ ನಿರ್ಧರಿಸುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಈ ಕಾರ್ಯಾಚರಣೆಯ ವೇಳೆ ಚೀನಾ ತನ್ನ ಅತ್ಯಾಧುನಿಕ 'ಸಿಂಥೆಟಿಕ್ ಅಪರ್ಚರ್ ರಾಡಾರ್' ಉಪಗ್ರಹಗಳನ್ನು ಬಳಸಿಕೊಂಡು ಭಾರತದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ನಿಖರವಾದ ಲೊಕೇಶನ್ ಮತ್ತು ಸೇನಾ ಚಲನವಲನಗಳ ಮಾಹಿತಿಯನ್ನು ಕಲೆಹಾಕಿ, ಅದನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿತ್ತು.
ಸಾಮಾನ್ಯ ಆಪ್ಟಿಕಲ್ ಉಪಗ್ರಹಗಳಂತೆ ಮೋಡ, ದಟ್ಟವಾದ ಹೊಗೆ ಅಥವಾ ಕತ್ತಲಿಗೆ ಈ ಉಪಗ್ರಹಗಳು ಕುರುಡಾಗುವುದಿಲ್ಲ. ಹಗಲು-ರಾತ್ರಿ ಎನ್ನದೆ, ಎಂತಹ ಪ್ರತಿಕೂಲ ಹವಾಮಾನದಲ್ಲೂ ಭೂಮಿಯ ಮೇಲಿನ 1 ಮೀಟರ್‌ಗಿಂತಲೂ ಚಿಕ್ಕ ವಸ್ತುಗಳನ್ನು (ಟ್ಯಾಂಕ್, ಕ್ಷಿಪಣಿ ಲಾಂಚರ್ ಇತ್ಯಾದಿ) ಇದು ನಿಖರವಾಗಿ ಗುರುತಿಸಬಲ್ಲದು. ಚೀನಾ ತನ್ನ ಬಳಿಯಿರುವ 50 ರಿಂದ 80 ಇಂತಹ ಅತ್ಯಾಧುನಿಕ ಉಪಗ್ರಹಗಳ ಬೃಹತ್ ಜಾಲವನ್ನು ಭಾರತದ ಗಡಿಯ ಮೇಲೆ ಹರಿಬಿಟ್ಟು ಸತತ ಕಣ್ಗಾವಲು ಇರಿಸಿತ್ತು.
ಆದರೆ, ಚೀನಾದ ಈ ಬಾಹ್ಯಾಕಾಶ ದರ್ಪವನ್ನು ಮುರಿಯಲು ಭಾರತ ಇದೀಗ 'ಕಾಗ್ನಿಟಿವ್ ಎಲೆಕ್ಟ್ರಾನಿಕ್ ವಾರ್‌ಫೇರ್' ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಶತ್ರುಗಳ ಉಪಗ್ರಹಗಳಿಗೆ ಅಕ್ಷರಶಃ ಹುಚ್ಚುಹಿಡಿಸುತ್ತಿದೆ.
ಭಾರತ ಅಳವಡಿಸಿಕೊಂಡಿರುವ ಈ ಹೊಸ 'ಘೋಸ್ಟ್ ವಾರ್‌ಫೇರ್' ಅಥವಾ ಮಾಯಾಜಾಲದ ತಂತ್ರಜ್ಞಾನವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಿಜಿಟಲ್ ರೇಡಿಯೋ ಫ್ರೀಕ್ವೆನ್ಸಿ ಮೆಮೊರಿ ಆಧರಿಸಿ ಕೆಲಸ ಮಾಡುತ್ತದೆ. ಇದು ಪ್ರಮುಖವಾಗಿ 'ಘೋಸ್ಟಿಂಗ್' ಮತ್ತು 'ಇರೇಸರ್' ಎಂಬ ಎರಡು ಕೌಶಲ್ಯಗಳನ್ನು ಬಳಸಿಕೊಂಡು ಚೀನಾದ ಉಪಗ್ರಹಗಳನ್ನು ಮೂರ್ಖರನ್ನಾಗಿಸುತ್ತದೆ.
ಘೋಸ್ಟಿಂಗ್ ತಂತ್ರದ ಮೂಲಕ, ಶತ್ರುಗಳ ಉಪಗ್ರಹದಿಂದ ಬರುವ ರಾಡಾರ್ ತರಂಗಗಳನ್ನು ವೇಗವಾಗಿ ಗ್ರಹಿಸಿ, ಕೃತಕವಾದ ಪ್ರತಿಫಲನವನ್ನು ಅಂದರೆ Echo ಅನ್ನು ಸೃಷ್ಟಿಸಲಾಗುತ್ತದೆ. ಅಂದರೆ, ರಾಜಸ್ಥಾನದ ಯಾವುದೊ ಮೂಲೆಯ ಖಾಲಿ ಮರುಭೂಮಿಯಲ್ಲಿ 50 ಸೇನಾ ಟ್ಯಾಂಕ್‌ಗಳು ಅಥವಾ ಬೃಹತ್ S-400 ಬ್ಯಾಟರಿಗಳು ನಿಂತಿರುವಂತೆ ಶತ್ರುಗಳ ಉಪಗ್ರಹದ ಪರದೆಯ ಮೇಲೆ ಕೃತಕ ಚಿತ್ರಣವನ್ನು ಮೂಡಿಸಲಾಗುತ್ತದೆ. ಇದನ್ನು ನಂಬಿ ಪಾಕಿಸ್ತಾನ ಅಥವಾ ಚೀನಾ ಆ ಖಾಲಿ ಜಾಗದ ಮೇಲೆ ತಮ್ಮ ದುಬಾರಿ ಕ್ಷಿಪಣಿಗಳನ್ನು ಉಡಾಯಿಸಿ ಕೈಸುಟ್ಟುಕೊಳ್ಳುತ್ತವೆ.
ಮತ್ತೊಂದೆಡೆ, 'ಇರೇಸರ್' ತಂತ್ರವು ಇದಕ್ಕಿಂದಲೂ ಅಪಾಯಕಾರಿಯಾಗಿದೆ. ಇದು ನಮ್ಮ ಸೇನೆಯ ನೈಜ ಯುದ್ಧ ಟ್ಯಾಂಕ್‌ಗಳು ಅಥವಾ ಕ್ಷಿಪಣಿಗಳು ಇರುವ ಸ್ಥಳವನ್ನು ಶತ್ರುಗಳ ರಾಡಾರ್‌ಗೆ ಕಾಣದಂತೆ ಸಂಪೂರ್ಣವಾಗಿ ಮರೆಮಾಚುತ್ತದೆ. ವಾಸ್ತವದಲ್ಲಿ ಅಲ್ಲಿ ನೂರಾರು ಸೇನಾ ವಾಹನಗಳಿದ್ದರೂ, ರಾಡಾರ್ ತರಂಗಗಳನ್ನು ನುಂಗಿಹಾಕುವ ಅಥವಾ ದಿಕ್ಕುತಪ್ಪಿಸುವ ಮೂಲಕ ಚೀನಾದ ಉಪಗ್ರಹಕ್ಕೆ ಅಲ್ಲಿ ಕೇವಲ ಖಾಲಿ ಮರುಭೂಮಿ ಇರುವಂತೆ ಭ್ರಮೆ ಹುಟ್ಟಿಸುತ್ತದೆ.
ಹೀಗೆ ಕ್ಷಣಕ್ಷಣಕ್ಕೂ ತನ್ನ ಫ್ರೀಕ್ವೆನ್ಸಿ ಬದಲಾಯಿಸುವ ಈ AI ವ್ಯವಸ್ಥೆಯಿಂದಾಗಿ, ಚೀನಾಕ್ಕೆ ತನ್ನದೇ ಉಪಗ್ರಹಗಳ ಡೇಟಾವನ್ನು ನಂಬಲಾಗದಂತಹ ಹತಾಶ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಎಲೆಕ್ಟ್ರಾನಿಕ್ ಮಾಯಾಜಾಲದ ಜೊತೆಗೆ ಭವಿಷ್ಯದ ಬಾಹ್ಯಾಕಾಶ ಸಮರಕ್ಕೆ ಭಾರತ ಇನ್ನಷ್ಟು ಕಠಿಣ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆಯಿದೆ.
ಇಸ್ರೋದ 'ನೇತ್ರಾ' ಕಣ್ಗಾವಲು ವ್ಯವಸ್ಥೆಯ ಮೂಲಕ ಭಾರತದ ಗಡಿಯ ಮೇಲೆ ಯಾವಾಗ, ಯಾವ ಶತ್ರು ಉಪಗ್ರಹ ಹಾದುಹೋಗುತ್ತದೆ ಎಂಬ ನಿಖರ ಮಾಹಿತಿ ನಮ್ಮ ರಕ್ಷಣಾ ಪಡೆಗಳಿಗೆ ಲಭ್ಯವಿದೆ. ಕೇವಲ ದಿಕ್ಕುತಪ್ಪಿಸುವುದಷ್ಟೇ ಅಲ್ಲದೆ, ಹೀಗೆ ನಮ್ಮ ಗಡಿಯ ಮೇಲೆ ಗೂಢಚರ್ಯೆ ನಡೆಸುವ ಶತ್ರು ಉಪಗ್ರಹಗಳನ್ನು ಭೂಮಿಯಿಂದಲೇ ಹೈ-ಎನರ್ಜಿ ಲೇಸರ್ ಕಿರಣಗಳನ್ನು ಹಾಯಿಸಿ ಕುರುಡು ಮಾಡುವ ಅಥವಾ ಅದರ ಸೆನ್ಸಾರ್‌ಗಳನ್ನು ಮತ್ತು ಸೋಲಾರ್ ಪ್ಯಾನಲ್‌ಗಳನ್ನು ಶಾಶ್ವತವಾಗಿ ನಾಶಪಡಿಸುವ ಆಂಟಿ-ಸ್ಯಾಟಲೈಟ್ ತಂತ್ರಜ್ಞಾನವನ್ನು ಭಾರತ ಭಾರಿ ಪ್ರಮಾಣದಲ್ಲಿ ಅಳವಡಿಸಿಕೊಳ್ಳುತ್ತಿದೆ.
ಆಧುನಿಕ ಯುದ್ಧತಂತ್ರದಲ್ಲಿ ಇನ್ನು ಮುಂದೆ 'ನಾವು ನಿಯಮ ಪಾಲಿಸುವ ಒಳ್ಳೆಯವರು, ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಬಳಸುವುದಿಲ್ಲ' ಎಂದು ಕೈಕಟ್ಟಿ ಕುಳಿತುಕೊಳ್ಳುವ ಕಾಲ ಮುಗಿದಿದೆ. ಶತ್ರುಗಳು ನಮ್ಮ ಗಡಿಯ ಮೇಲೆ ಗೂಢಚರ್ಯೆ ನಡೆಸಿದರೆ, ಅವರ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲೇ ಭಸ್ಮ ಮಾಡುವ ಸಾಮರ್ಥ್ಯವನ್ನು ಹೊಂದುವುದೇ 'ಆಪರೇಷನ್ ಸಿಂಧೂರ್' ನಮಗೆ ಕಲಿಸಿದ ಅತಿದೊಡ್ಡ ಪಾಠವಾಗಿದೆ ಮತ್ತು ಆ ದಿಕ್ಕಿನಲ್ಲಿ ಭಾರತದ ರಕ್ಷಣಾ ಪಡೆಗಳ ಈ ಹೆಜ್ಜೆಗಳು ನಿಜಕ್ಕೂ ನವಭಾರತದ ಸೇನಾ ಶಕ್ತಿಗೆ ಕನ್ನಡಿಯಾಗಿವೆ.