ಹಾರ್ಸಿಕಟ್ಟಾದಲ್ಲಿ ಸಂಸದ ಕಾಗೇರಿ ಜನ್ಮದಿನೋತ್ಸವದ ಅಂಗವಾಗಿ ಬೃಹತ್ ‘ಮೆಗಾ ಆರೋಗ್ಯ ತಪಾಸಣಾ ಶಿಬಿರ’
ಆಪ್ತ ನ್ಯೂಸ್ ಸಿದ್ದಾಪುರ:
ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನದ ಸಂಭ್ರಮದ ಅಂಗವಾಗಿ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಬರುವ ಭಾನುವಾರ (ಜುಲೈ 12) ಬೃಹತ್ ‘ಮೆಗಾ ಆರೋಗ್ಯ ತಪಾಸಣಾ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಶುಕ್ರವಾರದಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನವಿದ್ದು, ಅದರ ಪ್ರಯುಕ್ತ ಭಾನುವಾರ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಈ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಕಾಗೇರಿ ಸಮಸ್ತ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿರುವ ಈ ಜನಪರ ಕಾರ್ಯಕ್ರಮಕ್ಕೆ ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶಿರಸಿ-ಸಿದ್ದಾಪುರ ಕಾಗೇರಿ ಅಭಿಮಾನಿ ಬಳಗ, ಸಿದ್ದಾಪುರ ಬಿಜೆಪಿ ಮಂಡಳ, ಪ್ರಾಯೋಜಕತ್ವ ನೀಡಿದ್ದು ಸಾರ್ವಜನಿಕರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳು ವಂತೆ ವಿನಂತಿಸಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಪ್ರತಿನಿಧಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯ ವೈದ್ಯಕೀಯ ಮೂಲಸೌಕರ್ಯಗಳಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಮುಖ್ಯವಾಗಿ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು 142 ಕೋಟಿ ರೂಪಾಯಿ ಭಾರಿ ವೆಚ್ಚದಲ್ಲಿ 250 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅನಂತಮೂರ್ತಿ ಹೆಗಡೆ ಸ್ಮರಿಸಿದರು. ಹಾರ್ಸಿಕಟ್ಟಾ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ಕೊರತೆಯಿರುವುದನ್ನು ಮನಗಂಡು ಈ ಸಮಾಜಮುಖಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಗಂಭೀರ ಕಾಯಿಲೆಗಳು ಬಂದ ಮೇಲೆ ಚಿಕಿತ್ಸೆಗಾಗಿ ಅಲೆಯುವುದಕ್ಕಿಂತ ಮುಂಜಾಗ್ರತೆಯಾಗಿ ಇಂತಹ ಶಿಬಿರಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬದುಕಿನ ದೃಷ್ಟಿಯಿಂದ ಅತ್ಯಂತ ಉತ್ತಮ ಎಂದು ಅವರು ಗ್ರಾಮೀಣ ಜನತೆಗೆ ಕಿವಿಮಾತು ಹೇಳಿದರು.
ಈ ಮೆಗಾ ಉಚಿತ ಶಿಬಿರದಲ್ಲಿ ಶಿರಸಿಯ ಪ್ರಸಿದ್ಧ ಟಿ.ಎಸ್.ಎಸ್. ಆಸ್ಪತ್ರೆ, ಮಾರಿಕಾಂಬಾ ಆಸ್ಪತ್ರೆ ಹಾಗೂ ಜೋಶಿ ಆಸ್ಪತ್ರೆಗಳ ನುರಿತ ತಜ್ಞ ವೈದ್ಯರ ತಂಡಗಳು ಪಾಲ್ಗೊಳ್ಳಲಿವೆ. ಜನರಲ್ ಮೆಡಿಸಿನ್ ತಜ್ಞ ಜೆ.ಬಿ. ಕಾರಂತ, ಯೂರಾಲಜಿ ಸೂಪರ್ ಸ್ಪೆಷಲಿಸ್ಟ್ ಗಜಾನನ ಭಟ್ಟ, ಸ್ತ್ರೀರೋಗ ತಜ್ಞ ಶ್ರೀಧರ ವೈದ್ಯ, ಮಕ್ಕಳ ತಜ್ಞ ಆಶಿಶ್ ಜನ್ನು, ಚರ್ಮರೋಗ ತಜ್ಞೆ ಪ್ರಜ್ಞಾ ಜನ್ನು, ಕಣ್ಣಿನ ಸ್ಪೆಷಲಿಸ್ಟ್ ಹರ್ಷ ನಾಡಗೇರ್, ಕ್ಯಾನ್ಸರ್ ತಜ್ಞೆ ಮಮತಾ ಹೆಗಡೆ ಹಾಗೂ ಶಾರದಾ ಸತೀಶ್ ಸೇರಿದಂತೆ ವಿವಿಧ ವೈದ್ಯಕೀಯ ವಿಭಾಗಗಳ ನುರಿತ ತಜ್ಞರು ರೋಗಿಗಳಿಗೆ ನೇರ ಸಲಹೆ ನೀಡಲಿದ್ದಾರೆ. ಇದರೊಂದಿಗೆ ಶಿರಸಿಯ ಎಂ.ಎಂ. ಜೋಶಿ ಗಣೇಶ ನೇತ್ರಾಲಯದ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಬೆಂಗಳೂರಿನ ಭಾರತೀಯ ಕ್ಯಾನ್ಸರ್ ಸೊಸೈಟಿ ಮತ್ತು ಅಸ್ಮಿತೆ ಫೌಂಡೇಶನ್ ವೈದ್ಯರ ತಂಡದಿಂದ ಮಹಿಳೆಯರಿಗಾಗಿ ವಿಶೇಷವಾಗಿ ಸ್ತನ ಕ್ಯಾನ್ಸರ್ ಸೇರಿದಂತೆ ಉಚಿತ ಕ್ಯಾನ್ಸರ್ ಸ್ಕ್ರೀನಿಂಗ್ ನಡೆಯಲಿದೆ. ಶಿಬಿರದಲ್ಲಿ ಉಚಿತವಾಗಿ ಬಿಪಿ ಹಾಗೂ ಶುಗರ್ ಪರೀಕ್ಷೆ ನಡೆಸಿ ಅಗತ್ಯವಿರುವ ಕೆಲವು ಪ್ರಮುಖ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಭಾನುವಾರ ಬೆಳಿಗ್ಗೆ 9:00 ಗಂಟೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿ, 9:30 ಕ್ಕೆ ವೈದ್ಯರ ತಪಾಸಣೆ ಶುರುವಾಗಲಿದ್ದು, ಮಧ್ಯಾಹ್ನ 1:30 ರವರೆಗೆ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರದೀಪ್ ಹೆಗಡೆ, ಶಿವಕುಮಾರ ಕೊಂಡ್ಲಿ, ವಿನಾಯಕ ನಾಯ್ಕ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



