ಶಾಲೆಗೆ ನೂತನ ಕೊಠಡಿಗಳ ಲೋಕಾರ್ಪಣೆ: ಗಣಹೋಮ, ವಾಸ್ತುಶಾಂತಿ, ಸತ್ಯನಾರಾಯಣ ಪೂಜೆ ವಿಜೃಂಭಣೆ – ಅನಂತಮೂರ್ತಿ ಹೆಗಡೆಗೆ ಸನ್ಮಾನ

Jul 3, 2026 - 18:43
 0  168
ಶಾಲೆಗೆ ನೂತನ ಕೊಠಡಿಗಳ ಲೋಕಾರ್ಪಣೆ: ಗಣಹೋಮ, ವಾಸ್ತುಶಾಂತಿ, ಸತ್ಯನಾರಾಯಣ ಪೂಜೆ ವಿಜೃಂಭಣೆ – ಅನಂತಮೂರ್ತಿ ಹೆಗಡೆಗೆ ಸನ್ಮಾನ

ಆಪ್ತ ನ್ಯೂಸ್ ಸಿದ್ದಾಪುರ:

ತಾಲೂಕಿನ ವಾಜಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಖಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿಗಳ ಹಿನ್ನೆಲೆ ಗಣಹೋಮ, ವಾಸ್ತುಶಾಂತಿ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಮತ್ತು ಸಂಭ್ರಮದಿಂದ ನೆರವೇರಿದವು.

ಶಾಲೆಯ ನೂತನ ಕಟ್ಟಡದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ನೂತನ ಕೊಠಡಿಗಳ ಆರಂಭವು ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಮತ್ತಷ್ಟು ಬಲ ತುಂಬಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಸೌಲಭ್ಯ ದೊರೆಯುವಂತಾಗಿದೆ.

ಕಾರ್ಯಕ್ರಮದಲ್ಲಿ ಅನಂತ್ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತ್ ಮೂರ್ತಿ ಹೆಗಡೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಇತ್ತೀಚೆಗೆ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ವಾಟರ್ ಫಿಲ್ಟರ್‌ನ್ನು ಕೊಡುಗೆಯಾಗಿ ನೀಡಿದ್ದ ಹಿನ್ನೆಲೆಯಲ್ಲಿ, ಇದೇ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ, ಗ್ರಾಮಸ್ಥರು ಹಾಗೂ ಶಿಕ್ಷಕ ವೃಂದದ ವತಿಯಿಂದ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಂತ್ ಮೂರ್ತಿ ಹೆಗಡೆ, "ಶಾಲಾ ಮಕ್ಕಳು ಉತ್ತಮ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಮತ್ತು ಶುದ್ಧ ಕುಡಿಯುವ ನೀರನ್ನು ಸೇವಿಸುವ ಮೂಲಕ ಸದೃಢ ದೇಹವನ್ನು ನಿರ್ಮಿಸಿಕೊಳ್ಳಬೇಕು. ದೇಶದ ಭವಿಷ್ಯವಾಗಿರುವ ಮಕ್ಕಳು ಬಾಲ್ಯದಲ್ಲಿಯೇ ಆರೋಗ್ಯವಂತರಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ," ಎಂದು ಹೇಳಿದರು.

ತಮ್ಮ ಟ್ರಸ್ಟ್‌ನ ಸಾಮಾಜಿಕ ಸೇವೆಗಳ ಕುರಿತು ಮಾತನಾಡಿದ ಅವರು, "ನಮ್ಮ ಟ್ರಸ್ಟ್ ವತಿಯಿಂದ ಈಗಾಗಲೇ 150ಕ್ಕೂ ಹೆಚ್ಚು ಶಾಲೆಗಳಿಗೆ ವಾಟರ್ ಫಿಲ್ಟರ್‌ಗಳನ್ನು ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿಯೂ ಅಗತ್ಯವಿರುವವರಿಗೆ ನೆರವು ನೀಡುತ್ತಾ ಬಂದಿದ್ದೇವೆ. ಸಮಾಜಮುಖಿ ಕಾರ್ಯಗಳ ಮೂಲಕ ಜನರಿಗೆ ಉಪಕಾರವಾಗಬೇಕು ಎಂಬುದೇ ನಮ್ಮ ಧ್ಯೇಯ," ಎಂದು ತಿಳಿಸಿದರು.

ಅಲ್ಲದೆ, "ನಟ ಪುನೀತ್ ರಾಜಕುಮಾರ್ ಅವರು ಬದುಕಿರುವಾಗ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಬೇಕು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ನೀಡಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳನ್ನು ಮಾಡಬೇಕು," ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪಾಲಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ನೂತನ ಕೊಠಡಿಗಳ ಆರಂಭದಿಂದ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಮತ್ತಷ್ಟು ಸುಗಮವಾಗಲಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0