ಬಾಂಬ್ ಸ್ಪೋಟ ಪ್ರಕರಣ ಭೇದಿಸಿದ ಉತ್ತರ ಕನ್ನಡ ಪೊಲೀಸರು: ಮೂವರು ವಶಕ್ಕೆ, 3 ಜೀವಂತ ನಾಡಬಾಂಬ್‌ ಪತ್ತೆ

Jun 30, 2026 - 20:55
 0  232
ಬಾಂಬ್ ಸ್ಪೋಟ ಪ್ರಕರಣ ಭೇದಿಸಿದ ಉತ್ತರ ಕನ್ನಡ ಪೊಲೀಸರು: ಮೂವರು ವಶಕ್ಕೆ, 3 ಜೀವಂತ ನಾಡಬಾಂಬ್‌ ಪತ್ತೆ

ಆಪ್ತ ನ್ಯೂಸ್ ಕಾರವಾರ:

ಜಿಲ್ಲೆಯಲ್ಲಿನ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಉತ್ತರ ಕನ್ನಡ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೃತ ನಾಗೇಂದ್ರ ಗೌಡ ಅವರ ಮೊಬೈಲ್ ಕರೆ ವಿವರಗಳು ಮತ್ತು ಸಂಭಾಷಣೆಗಳನ್ನು ಆಧರಿಸಿ ಪೊಲೀಸರು ಸುಮಾರು 35ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಈ ತನಿಖೆಯ ವೇಳೆ ಶಿರಗುಂಜಿ ಮೂಲದ ಸಂದೀಪ್, ಹಾಗೂ ಸರಲೇಬೈಲ್ ಮೂಲದ ಮೃತ ನಾಗೇಂದ್ರ ಅವರ ಅತ್ತೆ ಮಕ್ಕಳಾದ ನಾರಾಯಣ ಗೌಡ ಮತ್ತು ನಾಗರಾಜ್ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ದಟ್ಟ ಅರಣ್ಯದಲ್ಲಿ 3 ಜೀವಂತ ನಾಡಬಾಂಬ್ ಪತ್ತೆ

ಆರೋಪಿಗಳ ವಿಚಾರಣೆ ವೇಳೆ ದೊರೆತ ಮಾಹಿತಿಯ ಮೇರೆಗೆ ಅಗಸೂರು ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಜೀವಂತ ನಾಡಬಾಂಬ್‌ಗಳನ್ನು ಬಚ್ಚಿಡಲಾಗಿರುವ ಸ್ಥಳಕ್ಕೆ ಪೊಲೀಸರು ತೆರಳಿದರು. ಬಾಂಬ್ ಪತ್ತೆದಳದ ಸಹಾಯದಿಂದ 3 ಜೀವಂತ ನಾಡಬಾಂಬ್‌ಗಳನ್ನು ಪತ್ತೆಹಚ್ಚಲಾಗಿದೆ.

ಮಂಗಳವಾರ ಮಧ್ಯಾಹ್ನ ಧಾರವಾಡದಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ನಾಡಬಾಂಬ್‌ಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಲು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ ಎಂದು ತಿಳಿದುಬಂದಿದೆ.

ಬಾಂಬ್ ತಯಾರಿಕೆ ಕುರಿತು ಹೊಸ ಮಾಹಿತಿ

ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ ಪೊಲೀಸರಿಗೆ ನಾಡಬಾಂಬ್ ತಯಾರಿಕೆಯಲ್ಲಿ ಹೊನ್ನಾವರ ತಾಲೂಕಿನ ಚಂದಾವರ ಮೂಲದ ಜಾರ್ಜ್ ಫರ್ನಾಂಡಿಸ್ (63) ಎಂಬುವರ ಹೆಸರು ಕೇಳಿಬಂದಿದೆ.

ಪ್ರಸ್ತುತ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾರ್ಜ್ ಫರ್ನಾಂಡಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಅವರ ವಿಚಾರಣೆಯಿಂದ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ತನಿಖೆ ಮುಂದುವರಿಕೆ

ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸುತ್ತಿರುವ ಉತ್ತರ ಕನ್ನಡ ಪೊಲೀಸರು, ಬಾಂಬ್ ತಯಾರಿಕೆ, ಸಂಗ್ರಹಣೆ ಹಾಗೂ ಇದಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ಪಾತ್ರದ ಕುರಿತು ಸಮಗ್ರ ತನಿಖೆ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣದಲ್ಲಿ ಇನ್ನಷ್ಟು ಮಹತ್ವದ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0