ಬನವಾಸಿ ಮಧುಕೇಶ್ವರ ದೇವಸ್ಥಾನ: ಸೋರಿಕೆ ನಿಂತಿತು, ಆದರೆ ಪ್ರಶ್ನೆಗಳು ನಿಂತಿಲ್ಲ
ಡಾ. ರವಿಕಿರಣ ಪಟವರ್ಧನ
****
ಶತಮಾನಗಳ ಇತಿಹಾಸ ಹೊತ್ತ ಶ್ರೀಕ್ಷೇತ್ರ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನ ಪ್ರತಿ ಮಳೆಗಾಲದಲ್ಲೂ ನೀರು ಸೋರಿ ಸುದ್ದಿಯಾಗುತ್ತಿತ್ತು. ಈ ಬಾರಿ ಮಾತ್ರ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ASI) ದೇವಸ್ಥಾನದ ಮೇಲ್ಭಾಗದಲ್ಲಿ ಕೈಗೊಂಡ ಪಾರದರ್ಶಕ ಜಲನಿರೋಧಕ (Transparent Waterproof) ಲೇಪನದ ಪರಿಣಾಮ ಸೋರಿಕೆ ಸಂಪೂರ್ಣವಾಗಿ ನಿಂತಿರುವುದು ಅತ್ಯಂತ ಸಂತಸದ ಬೆಳವಣಿಗೆ. ಈ ಸಾಧನೆಗೆ ಕಾರಣರಾದ ಅಧಿಕಾರಿಗಳು, ತಜ್ಞರು ಹಾಗೂ ವರ್ಷಗಳ ಕಾಲ ಈ ಸಮಸ್ಯೆಯನ್ನು ಸಾರ್ವಜನಿಕ ಗಮನಕ್ಕೆ ತಂದು ನಿರಂತರ ಹೋರಾಟ ನಡೆಸಿದ ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಅಭಿನಂದನಾರ್ಹರು.
ಆದರೆ ಈ ಯಶಸ್ಸಿನೊಂದಿಗೆ ಕೆಲವು ಗಂಭೀರ ಪ್ರಶ್ನೆಗಳೂ ಎದುರಾಗುತ್ತವೆ. ಇಷ್ಟು ಪರಿಣಾಮಕಾರಿ, ತಾಂತ್ರಿಕವಾಗಿ ಸಾಧ್ಯವಿದ್ದ ಪರಿಹಾರವನ್ನು ಇಷ್ಟು ವರ್ಷಗಳ ಹಿಂದೆ ಏಕೆ ಜಾರಿಗೊಳಿಸಲಾಗಲಿಲ್ಲ? ವರ್ಷಗಳ ಕಾಲ ದೇವಸ್ಥಾನ ಸೋರಿಕೆಯಿಂದ ನರಳಲು ಕಾರಣವೇನು?
ಇದು ಕೇವಲ ತಡವಾಗಿ ಮಾಡಿದ ಕಾಮಗಾರಿಯ ಪ್ರಶ್ನೆಯಲ್ಲ. ನಿರಂತರವಾಗಿ ನೀರು ಒಳನುಗ್ಗುವುದರಿಂದ ಶತಮಾನಗಳಷ್ಟು ಹಳೆಯ ಕಲ್ಲಿನ ಶಿಲ್ಪಗಳು, ಗರ್ಭಗುಡಿಯ ರಚನೆ ಹಾಗೂ ಐತಿಹಾಸಿಕ ಕಟ್ಟಡದ ಬುನಾದಿಯ ಮೇಲೆ ಎಷ್ಟು ಪರಿಣಾಮ ಬೀರಿರಬಹುದು ಎಂಬುದರ ಸಮಗ್ರ ಮೌಲ್ಯಮಾಪನ ಅಗತ್ಯವಾಗಿದೆ. ಒಮ್ಮೆ ಹಾನಿಗೊಳಗಾದ ಐತಿಹಾಸಿಕ ಶಿಲ್ಪಸಂಪತ್ತನ್ನು ಹಿಂದಿನ ಸ್ಥಿತಿಗೆ ತರುವುದು ಅಸಾಧ್ಯ. ಆದ್ದರಿಂದ ಇದು ಕೇವಲ ಸೋರಿಕೆಯ ಸಮಸ್ಯೆಯಲ್ಲ; ನಮ್ಮ ರಾಷ್ಟ್ರೀಯ ಪರಂಪರೆಯ ಸಂರಕ್ಷಣೆಯ ಪ್ರಶ್ನೆಯಾಗಿದೆ.
ಭಕ್ತರು, ಸ್ಥಳೀಯರು ಹಾಗೂ ಹೋರಾಟ ಸಮಿತಿಯವರು ವರ್ಷಗಳ ಕಾಲ ಮನವಿ ಸಲ್ಲಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ತ್ವರಿತವಾಗಿ ಸ್ಪಂದಿಸದಿರುವುದು ಏಕೆ? ಕಡತಗಳು ಎಲ್ಲಿ ವಿಳಂಬವಾದವು? ಆಡಳಿತಾತ್ಮಕ ನಿರ್ಲಕ್ಷ್ಯವೇ, ತಾಂತ್ರಿಕ ಗೊಂದಲವೇ ಅಥವಾ ಆದ್ಯತೆಯ ಕೊರತೆಯೇ ಕಾರಣ? ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ವಿಳಂಬದಿಂದ ಐತಿಹಾಸಿಕ ಸ್ಮಾರಕಕ್ಕೆ ಉಂಟಾಗಿರುವ ಹಾನಿಯ ಕುರಿತು ಸಮಗ್ರ ತನಿಖೆ ನಡೆಸಿ, ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಇದು ಶಿಕ್ಷೆಗಾಗಿ ಮಾತ್ರವಲ್ಲ, ಇಂತಹ ನಿರ್ಲಕ್ಷ್ಯ ಮತ್ತೆ ಮರುಕಳಿಸದಂತೆ ಎಚ್ಚರಿಕೆಯ ಕ್ರಮವಾಗಬೇಕು.
ಈ ಸಮಸ್ಯೆ ಪರಿಹಾರಗೊಳ್ಳುವಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸಮಿತಿಯಲ್ಲಿ ಉತ್ತರ ಕನ್ನಡದ ಸಂಸದರು ಸದಸ್ಯರಾಗಿರುವುದು ವಿಷಯಕ್ಕೆ ಹೆಚ್ಚಿನ ಆದ್ಯತೆ ಸಿಗಲು ನೆರವಾಗಿರಬಹುದು ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಜನಪ್ರತಿನಿಧಿಗಳು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಇದೇ ರೀತಿಯ ಕಾಳಜಿಯನ್ನು ಮುಂದುವರಿಸಬೇಕೆಂಬುದು ಜಿಲ್ಲೆಯ ಜನರ ಆಶಯವಾಗಿದೆ.
ಈ ಹಿಂದೆ ಬನವಾಸಿಯ ಮಹಾನಂದಿಯ ರಕ್ಷಣೆಗೆ ಸ್ವತಃ ಪತ್ರ ಬರೆದು ವರ್ಷಗಳ ನಂತರ ಅದು ಸುಸ್ಥಿತಿಗೆ ಬರುವಂತೆ ಮಾಡಿ ಈಗ ಮಹಾನಂದಿ ಬರುವಂತಹ ಭಕ್ತರ ಆಕರ್ಷಣೆಗೆ ಒಳಗಾಗುತ್ತಿದೆ ಎನ್ನುವುದು ಇನ್ನೂ ಸಂತೋಷದ ಸಂಗತಿ ಆದರೆ ಭಕ್ತರು ಈಗಲೂ ಅದಕ್ಕೆ ಮುಟ್ಟದೆ ಇದ್ದರೆ ಈ ಸುಸ್ಥಿತಿ ಮುಂದುವರೆಯುವುದು. ಬಂದಂತಹ ಭಕ್ತರು ಅದಕ್ಕೆ ಕೈಹಚ್ಚದಂತೆ ಸ್ಟೀಲಿನ ರಕ್ಷಣೆ ಗ್ರೀಲ್ ಅಳವಡಿಸಬೇಕು
ಸೋರಿಕೆ ನಿಂತಿರುವುದು ಒಂದು ಮಹತ್ವದ ಸಾಧನೆ. ಆದರೆ ಅದೇ ಅಂತಿಮ ಗುರಿಯಲ್ಲ. ರಾಜ್ಯದ ಎಲ್ಲ ಸಂರಕ್ಷಿತ ಸ್ಮಾರಕಗಳಿಗೂ ನಿಯಮಿತ ತಪಾಸಣೆ, ವೈಜ್ಞಾನಿಕ ನಿರ್ವಹಣೆ ಹಾಗೂ ಸಮಯೋಚಿತ ದುರಸ್ತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಐತಿಹಾಸಿಕ ದೇವಾಲಯಗಳು ಮತ್ತು ಸ್ಮಾರಕಗಳನ್ನು ಉಳಿಸುವುದು ಕೇವಲ ಇಲಾಖೆಯ ಕರ್ತವ್ಯವಲ್ಲ; ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮುಂದಿನ ಪೀಳಿಗೆಗೆ ನಾವು ನೀಡಬೇಕಾದ ಅಮೂಲ್ಯ ಪರಂಪರೆಯ ಸಂರಕ್ಷಣೆಯ ರಾಷ್ಟ್ರೀಯ ಜವಾಬ್ದಾರಿಯಾಗಿದೆ.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು.
ಸೋರಿಕೆ ನಿಂತಿದೆ ಎಂಬುದು ಸಂತಸದ ವಿಷಯ. ಆದರೆ ಸೋರಿಕೆ ನಿಲ್ಲಿಸಲು ಇಷ್ಟು ವರ್ಷ ಯಾಕೆ ಕಾಯಬೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಗಲೇಬೇಕು. ಸಮಗ್ರ ತನಿಖೆಯಾಗಬೇಕು. ಹೊಣೆಗಾರಿಕೆ ನಿಗದಿಯಾಗಬೇಕು. ಬನವಾಸಿಯ ಅನುಭವ ರಾಜ್ಯದ ಎಲ್ಲ ಐತಿಹಾಸಿಕ ಸ್ಮಾರಕಗಳ ಪಾಠವಾಗಬೇಕು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
1



