ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಶಿರಸಿ-ಹಾವೇರಿ ರಸ್ತೆ ಸಮಸ್ಯೆ ನಿರ್ಮಾಣ: ಶಕ್ತಿ ಮೀರಿ ಶ್ರಮಿಸುವ ಭರವಸೆ ನೀಡಿದ ಕಾಗೇರಿ

May 19, 2026 - 20:59
 0  92
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಶಿರಸಿ-ಹಾವೇರಿ ರಸ್ತೆ ಸಮಸ್ಯೆ ನಿರ್ಮಾಣ: ಶಕ್ತಿ ಮೀರಿ ಶ್ರಮಿಸುವ ಭರವಸೆ ನೀಡಿದ ಕಾಗೇರಿ

ಶಿರಸಿ (ಉತ್ತರ ಕನ್ನಡ):

ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ (NH 766E) ಅಸಮರ್ಪಕ ನಿರ್ವಹಣೆ ಹಾಗೂ ಕಾಮಗಾರಿಯ ವಿಳಂಬದಿಂದಾಗಿ ಜನಸಾಮಾನ್ಯರು ದಿನನಿತ್ಯ ನರಕಯಾತನೆ ಅನುಭವಿಸುತ್ತಿರುವುದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ನಿರ್ಮಾಣ ಹಂತದಲ್ಲಿರುವ ಹೆದ್ದಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸುತ್ತೇನೆ. ವಿಳಂಬವಾಗಿರುವ ಕಾಮಗಾರಿಗೆ ಚುರುಕು ಮುಟ್ಟಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಅಗತ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜನತೆಗೆ ಭರವಸೆ ನೀಡಿದರು.

ಮಂಗಳವಾರ ನಗರದ ಸಂಸದರ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಸಿ-ಹಾವೇರಿ ಹೆದ್ದಾರಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

"ರಾಜ್ಯದ ಕಾಂಗ್ರೆಸ್‌ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ಆಡಳಿತಾತ್ಮಕವಾಗಿ ಸಂಪೂರ್ಣ ದಿವಾಳಿಯಾಗಿದ್ದು, ಶೇಕಡಾ ನೂರರಷ್ಟು ವಿಫಲ ಸರ್ಕಾರವೆಂದು ಸಾಬೀತಾಗಿದೆ. ಮುಖ್ಯಮಂತ್ರಿ ಕುರ್ಚಿ ಯಾವಾಗ ಬದಲಾವಣೆಯಾಗುತ್ತದೆ, ಯಾರು ಆ ಸ್ಥಾನದಲ್ಲಿ ಕೂರುತ್ತಾರೆ ಎಂಬ ಆಂತರಿಕ ಕಚ್ಚಾಟದಲ್ಲಿಯೇ ಮುಳುಗಿರುವ ಪರಿಣಾಮ, ಜನರ ಕಷ್ಟ-ಕಾರ್ಪಣ್ಯಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ" ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಡಳಿತ ಯಂತ್ರಕ್ಕೆ ಪಾರ್ಶ್ವವಾಯು:

"ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಆದರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಯಾಗುವ ಬದಲು, ದಿನಬೆಳಗಾದರೆ 'ಸಿಎಂ ಕುರ್ಚಿ ಯಾರಿಗೆ?' ಎಂಬ ಗೊಂದಲದ ಗೂಡಾಗಿದೆ. ಈ ಅಧಿಕಾರದ ಹಗ್ಗಜಗ್ಗಾಟ ತುತ್ತತುದಿಗೆ ತಲುಪಿದ್ದು, ಇದರ ನೇರ ಪರಿಣಾಮ ಆಡಳಿತ ಯಂತ್ರದ ಮೇಲಾಗಿದೆ. ಅಧಿಕಾರಿಗಳು ನಿರ್ಜೀವಿಗಳಂತೆ ವರ್ತಿಸುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ರಾಜ್ಯವು ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ," ಎಂದು ಕಾಗೇರಿ ಕಳವಳ ವ್ಯಕ್ತಪಡಿಸಿದರು.

ಭ್ರಷ್ಟಾಚಾರದಲ್ಲಿ ನಂಬರ್ 1, ಗೂಂಡಾಗಿರಿಗೆ ಪ್ರೋತ್ಸಾಹ:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ ಸಂಸದರು, "ಇಂದು ಕರ್ನಾಟಕ ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಕೊಲೆ, ದರೋಡೆ ಪ್ರಕರಣಗಳು ಮಿತಿಮೀರಿದ್ದು, ಶಾಂತಿ-ಸುವ್ಯವಸ್ಥೆ ಮರೀಚಿಕೆಯಾಗಿದೆ. ಇನ್ನೊಂದೆಡೆ, ಜನಿವಾರ, ಹಿಜಾಬ್ ಸೇರಿದಂತೆ ಅನಗತ್ಯ ವಿವಾದಗಳ ಸರಮಾಲೆಯನ್ನೇ ಸೃಷ್ಟಿಸಲಾಗುತ್ತಿದೆ. ಕೇವಲ ಅಲ್ಪಸಂಖ್ಯಾತರ ಓಲೈಕೆಗೆ ಮಾತ್ರ ಈ ಸರ್ಕಾರ ಸಮರ್ಪಿತವಾಗಿದ್ದು, ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಸಾರಾಸಗಟಾಗಿ ಧಿಕ್ಕರಿಸಲಾಗುತ್ತಿದೆ. ಕಾಂಗ್ರೆಸ್ಸಿನ ಮರಿ ಪುಡಾರಿಗಳ ಗೂಂಡಾ ವರ್ತನೆ ಮಿತಿ‌ ಮೀರಿದ್ದರೂ ನಿಯಂತ್ರಿಸುವವರಿಲ್ಲ" ಎಂದು ಕಿಡಿಕಾರಿದರು.

ಬೋಗಸ್ ಗ್ಯಾರಂಟಿಗಳು ಮತ್ತು ದಿವಾಳಿಯಾದ ಬೊಕ್ಕಸ:

"ರಾಜ್ಯ ಸರ್ಕಾರವು ಗ್ಯಾರಂಟಿಗಳೆಂಬ 'ಡುಪ್ಲಿಕೇಟ್ ಕಿರೀಟ'ವನ್ನು ತಲೆ ಮೇಲಿಟ್ಟುಕೊಂಡು ಮೆರೆಯುತ್ತಿದೆ. ಆದರೆ ವಾಸ್ತವವಾಗಿ ಯೋಜನೆಗಳು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿವೆ. 5 ಸಾವಿರ ಕೋಟಿ ರೂಪಾಯಿ ಎಲ್ಲಿಗೆ ಹೋಯಿತು ಎಂಬುದು ಯಾರಿಗೂ ಗೊತ್ತಿಲ್ಲ. 'ಗೃಹಲಕ್ಷ್ಮೀ' ಯೋಜನೆಯ ಹಣ ಎಷ್ಟು ಜನರಿಗೆ ತಲುಪಿದೆ ಎಂಬುದರ ಸ್ಪಷ್ಟತೆ ಇಲ್ಲ. 'ಯುವ ನಿಧಿ' ಯೋಜನೆ ಅಕ್ಷರಶಃ ಕಣ್ಮರೆಯಾಗಿದೆ. ಬರಿದಾದ ಖಜಾನೆಯನ್ನು ತುಂಬಿಕೊಳ್ಳಲು ವಿದ್ಯುತ್‌ ದರ ಸೇರಿದಂತೆ ಎಲ್ಲದರ ಬೆಲೆ ಏರಿಕೆ ಮಾಡಿ, ಜನಸಾಮಾನ್ಯರ ಮೇಲೆ ಬರೆ ಎಳೆಯಲಾಗುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೋದಿಯವರ ನಾಯಕತ್ವಕ್ಕೆ ಪ್ರಶಂಸೆ:

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಕಾಗೇರಿಯವರು, "ಮೋದಿಯವರ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ, ಬಲಿಷ್ಠ ಹಾಗೂ ಸರ್ವಶಕ್ತ ದೇಶವಾಗಿ ಹೊರಹೊಮ್ಮಿದೆ. ಭಾರತದ ಪ್ರತಿಭೆ ಇಂದು ಜಗತ್ತಿನೆಲ್ಲೆಡೆ ಬೆಳಗುತ್ತಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿಯವರು ಕರೆ ನೀಡಿರುವಂತೆ ನಾವೆಲ್ಲರೂ ಇಂಧನ ಮಿತವ್ಯಯವನ್ನು ರಾಷ್ಟ್ರೀಯ ಆದ್ಯತೆಯಾಗಿ ಸ್ವೀಕರಿಸಬೇಕು. ಜೊತೆಗೆ ಸಾವಯವ ಗೊಬ್ಬರ ಬಳಕೆ, ಚಿನ್ನ ಖರೀದಿ ಹಾಗೂ ವಿದೇಶಿ ವಿನಿಮಯವನ್ನು ತಾತ್ಕಾಲಿಕವಾಗಿ ಮುಂದೂಡುವ ಮೂಲಕ ದೇಶದ ಆರ್ಥಿಕತೆಗೆ ನಮ್ಮದೇ ಆದ ಕೊಡುಗೆ ನೀಡಬೇಕು" ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ ಸಾಗರ, ಪ್ರಮುಖರಾದ ನವೀನ ಶೆಟ್ಟಿ ಚಿಪಗಿ, ಆರ್.ವಿ.ಹೆಗಡೆ ಚಿಪಗಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


****

"ಮಳೆಮಾಪನ ಕೇಂದ್ರಗಳನ್ನು ತ್ವರಿತವಾಗಿ ದುರಸ್ತಿ ಮಾಡುವಂತೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರೋಬ್ಬರಿ 4 ಬಾರಿ ಸೂಚನೆ ನೀಡಿದೆ.‌ ಈ ವರ್ಷದಿಂದ ಹವಾಮಾನ ಆಧರಿತ ಬೆಳೆವಿಮೆಯ ಟೆಂಡರ್‌ ಅನ್ನು ಹೊಸ ಕಂಪೆನಿ ಪಡೆದುಕೊಂಡಿದ್ದು, ಮಳೆಮಾಪನ ಕೇಂದ್ರಗಳ ದುರಸ್ತಿಯಾಗದಿದ್ದರೆ ರೈತರಿಗೆ ಭಾರೀ ತೊಂದರೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿಯ ಪರಮಾವಧಿಯನ್ನು ತೋರಿಸುತ್ತದೆ. ಯೋಜನೆಗೆ ಹಣ ನೀಡಲು ಕೇಂದ್ರ ಸಿದ್ಧವಿದ್ದರೂ, ಅಗತ್ಯ ಪ್ರಸ್ತಾವನೆ ಸಲ್ಲಿಸುವಲ್ಲಿ ರಾಜ್ಯ ವಿಫಲವಾಗಿದೆ."

- ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0