ಹೆಚ್ಚುತ್ತಿರುವ ಠೇವಣಿ ವಂಚನೆ ಕೇಸ್‌ಗಳಿಗೆ ಡಿಸಿ ಖಡಕ್ ಎಚ್ಚರಿಕೆ! ಖಾಸಗಿ ಫೈನಾನ್ಸ್, ಮೀಟರ್ ಬಡ್ಡಿ ದಂಧೆ ವಿರುದ್ಧ ಜಿಲ್ಲಾಡಳಿತದ ಕಠಿಣ ಕ್ರಮ
ಆಪ್ತ ನ್ಯೂಸ್ ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು, ಅನಧಿಕೃತ ಫೈನಾನ್ಸ್ ಕಂಪನಿಗಳು ಹಾಗೂ ಕೆಲವು ಸಹಕಾರಿ ಸಂಘಗಳ ಮೂಲಕ ನಡೆಯುತ್ತಿರುವ ಠೇವಣಿ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರ ಜೀವಮಾನ ಉಳಿತಾಯವನ್ನು ರಕ್ಷಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ, ಅಕ್ರಮ ನಡೆಸುವ ಸಂಸ್ಥೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಮುಂಡಗೋಡ, ಹಳಿಯಾಳ ಸೇರಿದಂತೆ ವಿವಿಧ ತಾಲೂಕುಗಳಿಂದ ಅನಧಿಕೃತ ಹಣಕಾಸು ವ್ಯವಹಾರಗಳು, ಹೆಚ್ಚಿನ ಬಡ್ಡಿಯ ಆಮಿಷ ತೋರಿಸಿ ಠೇವಣಿ ಸಂಗ್ರಹಿಸುವುದು ಹಾಗೂ ಸಾರ್ವಜನಿಕರನ್ನು ವಂಚಿಸುವ ಕುರಿತು ಹಲವು ದೂರುಗಳು ಬಂದಿವೆ ಎಂದು ತಿಳಿಸಿದರು.
ಆರ್‌ಬಿಐ ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ತಕ್ಷಣ ಪ್ರಕರಣ
ಆರ್‌ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಅಥವಾ ಕಾನೂನುಬಾಹಿರವಾಗಿ ಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗಳ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಸಹಕಾರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಕ್ರಮ ಹಣಕಾಸು ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಜನರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ಹಣ ವಂಚಿಸುವವರ ವಿರುದ್ಧ ಕಠಿಣ ಕ್ರಮವೇ ಜಿಲ್ಲಾಡಳಿತದ ಆದ್ಯತೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಹಕಾರಿ ಸಂಘಗಳ ಕಾರ್ಯವೈಖರಿಗೆ ನಿಗಾ
ಕೆಲವು ಸಹಕಾರಿ ಸಂಘಗಳಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳಿಂದ ಸಾರ್ವಜನಿಕರು ತಮ್ಮ ಜೀವನಪೂರ್ತಿ ಕಷ್ಟಪಟ್ಟು ಉಳಿಸಿದ ಹಣವನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ಗಂಭೀರ ಸಂಗತಿ ಎಂದು ಜಿಲ್ಲಾಧಿಕಾರಿ ಆತಂಕ ವ್ಯಕ್ತಪಡಿಸಿದರು.
ಇಂತಹ ಘಟನೆಗಳು ಮರುಕಳಿಸದಂತೆ ಸಹಕಾರಿ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳ ಕಾರ್ಯವೈಖರಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಠೇವಣಿದಾರರ ಹಣದ ಸುರಕ್ಷತೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಅಧಿಕಾರಿಗಳು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಮೀಟರ್ ಬಡ್ಡಿ ದಂಧೆ ವಿರುದ್ಧವೂ ಸಮರ
ಜಿಲ್ಲೆಯಲ್ಲಿ ಮಿತಿಮೀರಿದ ಬಡ್ಡಿ ವಿಧಿಸಿ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಸಾಲದ ಸುಳಿಗೆ ಸಿಲುಕಿಸುವ ಮೀಟರ್ ಬಡ್ಡಿ ದಂಧೆ ಮೇಲೂ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಿದೆ.
ಇಂತಹ ಅಕ್ರಮ ಜಾಲಗಳನ್ನು ಪತ್ತೆಹಚ್ಚಿ ಕಾನೂನು ಕ್ರಮವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸೂಚನೆ
ಅನಧಿಕೃತ ಹಣಕಾಸು ಸಂಸ್ಥೆಗಳ ಆಮಿಷಕ್ಕೆ ಸಾರ್ವಜನಿಕರು ಬಲಿಯಾಗದಂತೆ ಜಿಲ್ಲೆಯಾದ್ಯಂತ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅಧಿಕ ಬಡ್ಡಿ, ಅತಿಯಾದ ಲಾಭದ ಭರವಸೆ ಹಾಗೂ ಸುಲಭ ಸಾಲದ ಆಮಿಷಗಳಿಗೆ ಮರುಳಾಗದೆ, ಸರ್ಕಾರದಿಂದ ಮಾನ್ಯತೆ ಪಡೆದ ಹಾಗೂ ನಿಯಮಾನುಸಾರ ಕಾರ್ಯನಿರ್ವಹಿಸುವ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲೇ ವ್ಯವಹರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಒತ್ತು ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಪ್ರಮುಖ ಅಧಿಕಾರಿಗಳ ಭಾಗಿ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಸಹಕಾರಿ ಸಂಘಗಳ ಉಪ ನಿಬಂಧಕಿ ತೇಜಸ್ವಿನಿ ಗೌಡ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಜಿಲ್ಲೆಯ ಹಣಕಾಸು ಸಂಸ್ಥೆಗಳ ಮೇಲಿನ ನಿಗಾ ಹಾಗೂ ಸಾರ್ವಜನಿಕರ ಹಿತರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



