ಸಾಂಸ್ಕೃತಿಕ ವೈಶಿಷ್ಟ್ಯ ಉಳಿಸಿಕೊಂಡು ಎಲ್ಲ ಸಮುದಾಯದ ಜೊತೆ ಬಾಳುತ್ತಿರುವ ಹವ್ಯಕರು: ಆರ್.ಎಂ. ಹೆಗಡೆ ಬಾಳೇಸರ

Apr 5, 2026 - 20:14
 0  64
ಸಾಂಸ್ಕೃತಿಕ ವೈಶಿಷ್ಟ್ಯ ಉಳಿಸಿಕೊಂಡು ಎಲ್ಲ ಸಮುದಾಯದ ಜೊತೆ ಬಾಳುತ್ತಿರುವ ಹವ್ಯಕರು: ಆರ್.ಎಂ. ಹೆಗಡೆ ಬಾಳೇಸರ

ಆಪ್ತ ನ್ಯೂಸ್‌ ಶಿರಸಿ:

ಬ್ರಾಹ್ಮಣ ಸಮಾಜವು ತನ್ನ ಸ್ವಾಭಿಮಾನವನ್ನು ಕಾಪಾಡಿಕೊಂಡು, ಎಲ್ಲಾ ಸಮಾಜಗಳೊಂದಿಗೆ ಧರ್ಮ ಸಹಿಷ್ಣುತೆಯಿಂದ ಬೆರೆತು ಬದುಕುತ್ತಿರುವುದು ಅದರ ವೈಶಿಷ್ಟ್ಯ ಎಂದು ಅಖಿಲ ಹವ್ಯಕ ಮಹಾಸಭೆಯ ಉಪಾಧ್ಯಕ್ಷ ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.
ಭಾನುವಾರ ನಗರದ ಲಯನ್ಸ್ ಸಭಾಂಗಣದಲ್ಲಿ ಹವ್ಯಕ ಮಹಾಸಭೆ ಆಯೋಜಿಸಿದ್ದ ‘ಪ್ರತಿಬಿಂಬ’ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಹವ್ಯಕ ಸಮಾಜವು ತನ್ನ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿಕೊಂಡೇ ಇತರ ಸಮಾಜಗಳೊಂದಿಗೆ ಹೊಂದಾಣಿಕೆಯಿಂದ ಬದುಕುತ್ತಿದೆ ಎಂದು ಅವರು ಹೇಳಿದರು. 

ಕೃಷಿ, ವೈದಿಕ, ಕಲೆ ಹಾಗೂ ಯಕ್ಷಗಾನ ಕ್ಷೇತ್ರಗಳಿಗೆ ಹವ್ಯಕರ ಕೊಡುಗೆ ಮಹತ್ವದ್ದಾಗಿದ್ದು, ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಶಿರಸಿಯಲ್ಲಿ ಹವ್ಯಕ ಭವನ ನಿರ್ಮಾಣವು ಅಗತ್ಯವಾಗಿದ್ದು, ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಸೇವಕ, ಲೇಖಕ ವೈಶಾಲಿ ವಿ.ಪಿ. ಹೆಗಡೆ ಅವರು, ಹವ್ಯಕರ ಸಂಖ್ಯೆ ಅಂದಾಜು ಐದು ಲಕ್ಷದಷ್ಟಿದ್ದರೂ  ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಇದ್ದಾರೆ ಎಂದರು. ಹವ್ಯಕತನವು ಸಮುದಾಯದ ಅವಿಭಾಜ್ಯ ಅಂಗವಾಗಿದ್ದು, ಅಖಿಲ ಹವ್ಯಕ ಮಹಾಸಭೆ ಸಮುದಾಯವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಲಯನ್ಸ ಅಧ್ಯಕ್ಷ ಪ್ರಭಾಕರ ಹೆಗಡೆ, ಲಯನ್ಸ ಭವನ ಮುಕ್ತವಾಗಿದ್ದು, ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಿದ್ದ ದಿನಗಳಲ್ಲಿ ನೀಡಲಾಗುತ್ತದೆ‌. ಎಲ್ಲ  ಸಮಾಜದವರಿಗೂ  ನೀಡಲಾಗಿದೆ ಎಂದರು.

ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ನಿರ್ದೇಶಕರಾದ ಶಶಾಂಕ ಹೆಗಡೆ ಶೀಗೇಹಳ್ಳಿ, ಶ್ರೀಕಾಂತ ಭಟ್ಟ ಜಿ.ಎಂ.ಭಟ್ಟ ಕಾಜಿನಮನೆ, ದೀಪಕ್ ಗೋಳಿಕೈ, ವಿ.ಎಂ. ಹೆಗಡೆ ಹಲಗೇರಿ ಇತರರು ಇದ್ದರು. 

ಶಿಕ್ಷಕರಾದ ಡಿ.ಪಿ. ಹೆಗಡೆ ಹಾಗೂ ಗೀತಾಂಜಲಿ ಭಟ್ಟ ನಿರ್ವಹಿಸಿದರು. ಪ್ರಾಚಾರ್ಯ ಶಶಾಂಕ ಹೆಗಡೆ ವಂದಿಸಿದರು.



ಕಾರ್ಯಕ್ರಮದ ಅಂಗವಾಗಿ  ವಿವಿಧ ವಯೋಮಿತಿಗಳವರಿಗೆ ಸ್ಪರ್ಧೆಗಳು ಆಯೋಜಿಸಲಾಯಿತು. ಚಿಕ್ಕ ಮಕ್ಕಳಿಗೆ ಶ್ಲೋಕ ಪಠಣ, ಛದ್ಮವೇಷ ಹಾಗೂ ಬಣ್ಣ ತುಂಬುವ ಸ್ಪರ್ಧೆಗಳು ನಡೆದರೆ, ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪಾಠ, ಚಿತ್ರಕಲೆ, ಏಕಪಾತ್ರಾಭಿನಯ, ಯೋಗಾಸನ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ಹಿರಿಯ ವಿಭಾಗದಲ್ಲಿ ರಸಪ್ರಶ್ನೆ, ಆಶುಭಾಷಣ, ದೇಶಭಕ್ತಿಗೀತೆ, ಚರ್ಚಾ ಸ್ಪರ್ಧೆಗಳು ಹಾಗೂ ಸಂಪ್ರದಾಯ ಮತ್ತು ಜಾನಪದ ಗೀತೆ, ರಂಗೋಲಿ, ಹವಿರುಚಿ ಸ್ಪರ್ಧೆಗಳು ನಡೆಯಿತು. ಕರಕುಶಲ ವಸ್ತುಗಳೂ ಗಮನ ಸೆಳೆದವು.

***

ಹವ್ಯಕರು ಹೆಚ್ಚು ವಾಸವಾಗಿರುವ ಸ್ಥಳಗಳಲ್ಲಿ   ಶಿರಸಿ ಸೀಮೆಯೂ ಒಂದು. ಶಿರಸಿಯಲ್ಲಿ ಹವ್ಯಕರ ಭವನ, ವಿದ್ಯಾರ್ಥಿ ವಸತಿ ನಿಲಯ ಅಗತ್ಯ‌ ಬಹಳವಿದೆ.  ನನಗೆ ಬರುವ ದಿನಗಳಲ್ಲಿ ಈ ಕನಸು ಎಲ್ಲರ ಸಹಕಾರದಿಂದ ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ.
ಪ್ರಶಾಂತ ಭಟ್ಟ ಮಲವಳ್ಳಿ,
ಕಾರ್ಯರ್ಶಿ, ಹವ್ಯಕ ಮಹಾಸಭೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0