ದೇವಾಲಯಗಳು ಸಂಸ್ಕೃತಿಯಷ್ಟೇ ಅಲ್ಲ, ಪ್ರಕೃತಿ ಸಂರಕ್ಷಣೆಯ ಕೇಂದ್ರಗಳಾಗಲಿ: ಡಿಎಫ್‌ಒ ಸಂದೀಪ್ ಸೂರ್ಯವಂಶಿ
ಆಪ್ತ ನ್ಯೂಸ್ ಕಾನಸೂರು:
ದೇವಾಲಯಗಳು ಕೇವಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಪರಿಸರ ಸಂರಕ್ಷಣೆಯ ಕೇಂದ್ರಗಳಾಗಬೇಕು ಎಂದು ಉತ್ತರ ಕನ್ನಡ ವಿಭಾಗದ ಡಿಎಫ್‌ಒ ಸಂದೀಪ್ ಸೂರ್ಯವಂಶಿ ಕರೆ ನೀಡಿದರು.
ಸಿದ್ದಾಪುರ ತಾಲೂಕಿನ ಕುಚಗುಂಡಿಯ ಶ್ರೀ ಕಲ್ಯಾಣೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ದೇವರ ಹೆಸರಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಉಳಿಸುವ ಮಹತ್ವದ ಕಾರ್ಯ ಮಾಡಬಹುದು. ಕುಚಗುಂಡಿ ಗ್ರಾಮಸ್ಥರು ಕೈಗೊಂಡಿರುವ ಈ ಪ್ರಯತ್ನ ಇತರ ದೇವಾಲಯಗಳಿಗೂ ಮಾದರಿಯಾಗಬೇಕು. ಎಲ್ಲ ದೇವಸ್ಥಾನಗಳ ಟ್ರಸ್ಟ್‌ಗಳು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು" ಎಂದು ಹೇಳಿದರು.
ಪ್ರಕೃತಿ ಮತ್ತು ಮಹಿಳೆ ಎರಡನ್ನೂ ನಮ್ಮ ಸಂಸ್ಕೃತಿಯಲ್ಲಿ 'ಮಾತೆ' ಎಂದು ಗೌರವಿಸಲಾಗುತ್ತದೆ. ಈ ಎರಡೂ ಶಕ್ತಿಗಳು ಒಂದಾದಾಗ ಸಮೃದ್ಧ ಪರಿಸರ ನಿರ್ಮಾಣ ಸಾಧ್ಯ. ವನಮಹೋತ್ಸವದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಸಂತಸ ತಂದಿದೆ ಎಂದರು.
ಹವಾಮಾನ ವೈಪರೀತ್ಯ, ಉಷ್ಣಾಂಶ ಏರಿಕೆ ಹಾಗೂ ಮಳೆಯಲ್ಲಿನ ವ್ಯತ್ಯಾಸಗಳು ಪರಿಸರ ಅಸಮತೋಲನದ ಪರಿಣಾಮಗಳಾಗಿವೆ. ಅರಣ್ಯ ಅಭಿವೃದ್ಧಿಯ ಮೂಲಕವೇ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ; ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೋರಾಟಗಾರ ಅನಂತಮೂರ್ತಿ ಹೆಗಡೆ, ಮನುಷ್ಯರ ಜೊತೆಗೆ ಪ್ರಾಣಿ-ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಪರಿಸರ ನಾಶದಿಂದ ವನ್ಯಜೀವಿಗಳ ಆವಾಸ ಕುಗ್ಗುತ್ತಿದ್ದು, ಅರಣ್ಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಗ್ರಾಮೀಣ ಮಹಿಳೆಯರಿಗೆ ಹೊಲಿಗೆ ಹಾಗೂ ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಕುಚಗುಂಡಿ ನಿವಾಸಿ ಮಹೇಶ್ ಗೌಡ ಅವರ ಕುಟುಂಬಕ್ಕೆ ಅನಂತಮೂರ್ತಿ ಹೆಗಡೆ ವೈಯಕ್ತಿಕ ಧನಸಹಾಯ ನೀಡಿದರು. ಜೊತೆಗೆ ಸಂಸದ ವಿಶ್ವೇಶ್ವರ ಹೆಗಡೆ ಅವರ ಸಹಕಾರದ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಸಿಎಫ್ ಅಮಿತ್ ಚೌಹಾಣ್, ಮಾರಿಕಾಂಬಾ ಕಾಲೇಜಿನ ಪ್ರಾಚಾರ್ಯ ಬಾಲಚಂದ್ರ ಭಟ್ಟ, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಖಜಾಂಚಿ ಸಂತೋಷ್ ಹೆಗಡೆ ಸ್ವಾಗತಿಸಿ, ಸುಮಂಗಲಾ ಹೆಗಡೆ ವಂದಿಸಿದರು.
***
ಮಾದರಿ 'ದೇವರ ಕಾಡು' ನಿರ್ಮಾಣಕ್ಕೆ ಮನವಿ
ಕುಚಗುಂಡಿಯ ಶ್ರೀ ಕಲ್ಯಾಣೇಶ್ವರ ದೇವಸ್ಥಾನವು ಸೋದೆ ಅರಸರ ಕಾಲಕ್ಕಿಂತಲೂ ಪುರಾತನ ಇತಿಹಾಸ ಹೊಂದಿದ್ದು, ಹಿಂದೆ ದೇವಸ್ಥಾನಕ್ಕೆ 'ದೇವರ ಕಾಡು' ಮೀಸಲಾಗಿತ್ತು. ಕಾಲಕ್ರಮೇಣ ಅದು ನಾಶವಾಗಿರುವ ಹಿನ್ನೆಲೆಯಲ್ಲಿ ಪುನಃ ದೇವರ ಕಾಡು ನಿರ್ಮಿಸಲು ದೇವಸ್ಥಾನ ಟ್ರಸ್ಟ್ ಮುಂದಾಗಿದೆ.
ದೇವಸ್ಥಾನದ ಸುತ್ತಮುತ್ತ ಔಷಧೀಯ ಹಾಗೂ ಉಪಯುಕ್ತ ಗಿಡ-ಮರಗಳನ್ನು ಬೆಳೆಸಿ ಮಾದರಿ ದೇವರ ಕಾಡು ರೂಪಿಸಲು ಅರಣ್ಯ ಇಲಾಖೆಯ ಸಹಕಾರ ಕೋರಲಾಗಿದೆ. ಈ ಮನವಿಗೆ ಡಿಎಫ್‌ಒ ಸಂದೀಪ್ ಸೂರ್ಯವಂಶಿ ಸಹ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಪರಿಸರ ಸಂರಕ್ಷಣೆಗೆ ಇಂತಹ ದೇವರ ಕಾಡುಗಳ ನಿರ್ಮಾಣಕ್ಕೆ ಇಲಾಖೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



