ಅಘನಾಶಿನಿ ನದಿ ಉಳಿವಿಗೆ ತಾಂತ್ರಿಕ ಹಾಗೂ ಕಾನೂನು ಹೋರಾಟ: ಯುನೆಸ್ಕೋ ನಿರ್ದೇಶನದಿಂದ ಚಳವಳಿಗೆ ಆನೆ ಬಲ!
ಆಪ್ತ ನ್ಯೂಸ್ ಸಿದ್ದಾಪುರ:
ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ಅಘನಾಶಿನಿ ನದಿಯ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಈಗ ಜಾಗತಿಕ ಮಟ್ಟದ ಬೆಂಬಲ ದೊರೆತಿದೆ. ವಿಶ್ವ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಯುನೆಸ್ಕೋ (UNESCO) ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಮಹತ್ವದ ಮಾರ್ಗದರ್ಶನ ನೀಡಿದ್ದು, ಇದು ಅಘನಾಶಿನಿ ನದಿ ಜೋಡಣೆ ಯೋಜನೆ ವಿರೋಧಿ ಹೋರಾಟಕ್ಕೆ ಆನೆ ಬಲ ತಂದಿದೆ ಎಂದು ಮಾಜಿ ಜಿ.ಪಂ ಸದಸ್ಯ ಹಾಗೂ ಬೇಡ್ತಿ-ಅಘನಾಶಿನಿ ಕೊಳ್ಳ ಮುಳುಗಡೆ ಯೋಜನೆ ವಿರೋಧ ಸಮಿತಿಯ ಮಾಜಿ ಕಾರ್ಯದರ್ಶಿ ಎನ್. ವಿ. ಹೆಗಡೆ ಮುತ್ತಿಗೆ ತಿಳಿಸಿದ್ದಾರೆ.
ಸಿದ್ದಾಪುರದ ರಾಘವೇಂದ್ರ ಸಭಾ ಮಂಟಪದಲ್ಲಿ 'ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ'ಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಜರುಗಿದ 'ಅಘನಾಶಿನಿ ನದಿ ಜೋಡಣೆ ವಿರೋಧ ಸಭೆ'ಯಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ವೇದಿಕೆಯು ಸಲ್ಲಿಸಿದ್ದ ಆಕ್ಷೇಪಣೆಗೆ ಯುನೆಸ್ಕೋ ವಿಶ್ವ ಪರಂಪರೆಯ ಕೇಂದ್ರದಿಂದ ಬಂದಿರುವ ಅಧಿಕೃತ ಉತ್ತರದ ಪ್ರತಿಯನ್ನು ಪ್ರದರ್ಶಿಸಿ ಅವರು ಮಾತನಾಡಿದರು.
ಯುನೆಸ್ಕೋ ಪತ್ರದಲ್ಲೇನಿದೆ? ಕೇಂದ್ರಕ್ಕೆ ಕಟ್ಟುನಿಟ್ಟಿನ ವಾಗ್ದಂಡನೆ!
ಯಾವುದೇ ಅಭಿವೃದ್ಧಿ ಅಥವಾ ನದಿ ಜೋಡಣೆಯಂತಹ ಬೃಹತ್ ಯೋಜನೆಗಳು ವಿಶ್ವ ಪರಂಪರೆಯ ಸಂರಕ್ಷಣಾ ಚೌಕಟ್ಟುಗಳ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಪರಿಸರ ಸಮತೋಲನಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಗಳನ್ನು ಕೈಗೊಳ್ಳಬಾರದು ಎಂದು ಯುನೆಸ್ಕೋ ಸ್ಪಷ್ಟಪಡಿಸಿದೆ.
"೧೯೭೨ ರ ವಿಶ್ವ ಪರಂಪರೆಯ ಸಮಾವೇಶದ ಪ್ರಕಾರ, ಇಂತಹ ನೈಸರ್ಗಿಕ ಪರಂಪರೆಯ ರಕ್ಷಣೆ ಮತ್ತು ಸಂರಕ್ಷಣೆ ಆಯಾ ದೇಶಗಳ ಜವಾಬ್ದಾರಿಯಾಗಿದೆ. ಪರಿಸರ ಸೂಕ್ಷ್ಮ ವಲಯಗಳಲ್ಲಿನ ಯಾವುದೇ ಯೋಜನೆಯು ಸಂರಕ್ಷಣಾ ನಿಯಮಗಳು ಮತ್ತು ಸುಸ್ಥಿರ ಅಭ್ಯಾಸಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಯುನೆಸ್ಕೋ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಮೂಲಕ ವಾಗ್ದಂಡನೆ ವಿಧಿಸಿದೆ ಎಂದು ಎನ್. ವಿ. ಹೆಗಡೆ ವಿವರಿಸಿದರು.
ತಾಂತ್ರಿಕ ಮತ್ತು ಕಾನೂನಾತ್ಮಕ ಹೋರಾಟಕ್ಕೆ ನಿರ್ಣಯ
ಜನ ಮತ್ತು ಪರಿಸರ ವಿರೋಧಿಯಾಗಿರುವ 'ಅಘನಾಶಿನಿ - ವೇದಾವತಿ ನದಿ ಜೋಡಣೆ ಯೋಜನೆ'ಯನ್ನು ಸಂಪೂರ್ಣವಾಗಿ ತಡೆಯಲು, ಮುಂಬರುವ ದಿನಗಳಲ್ಲಿ ಸಾಂಘಿಕ ಸಂಘಟನೆಗಳ ಮೂಲಕ ತಾಂತ್ರಿಕ ಹಾಗೂ ಕಾನೂನಾತ್ಮಕ ಹೋರಾಟವನ್ನು ತೀವ್ರಗೊಳಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಅಭಿನಂದನೆ
ಅಘನಾಶಿನಿ ನದಿ ಜೋಡಣೆ ಯೋಜನೆಯ ಭೀತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು, ಯುನೆಸ್ಕೋ ವಿಶ್ವ ಪರಂಪರೆಯ ಕೇಂದ್ರಕ್ಕೆ ವ್ಯವಸ್ಥಿತ ಆಕ್ಷೇಪಣಾ ಪತ್ರ ಸಲ್ಲಿಸುವ ಮೂಲಕ ಭಾರತ ಸರ್ಕಾರಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲಿಸುವಂತೆ ನಿರ್ದೇಶನ ಹೊರಡಿಸುವಲ್ಲಿ ಯಶಸ್ವಿಯಾದ ಪ್ರಮುಖ ಹೋರಾಟಗಾರ ರವೀಂದ್ರ ನಾಯ್ಕ ಅವರನ್ನು ಸಭೆಯಲ್ಲಿ ಪ್ರೀತಿಪೂರ್ವಕವಾಗಿ ಅಭಿನಂದಿಸಲಾಯಿತು.
ಸಭೆಯ ವಿವರ:
ಕಾರ್ಯಕ್ರಮದಲ್ಲಿ ಕೆ. ಟಿ. ನಾಯ್ಕ ಸ್ವಾಗತಿಸಿದರೆ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನದಿ ಜೋಡಣೆ ಯೋಜನೆಗಳ ದುಷ್ಪರಿಣಾಮಗಳ ಕುರಿತು ಎಮ್. ಎಸ್. ನಾಯ್ಕ ನರಮುಂಡಗಿ, ಸಂಕೇತ ನಾಯ್ಕ ಹಲಗೇರಿ, ವಿದ್ಯಾ ನಾಯ್ಕ ಹಾರ್ಸಿಕಟ್ಟ, ರಾಜು ನಾಯ್ಕ ಕ್ಯಾದಗಿ ಹಾಗೂ ದಿವಾಕರ್ ನಾಯ್ಕ ಬಾಳೆಜಡ್ಡಿ ತಮ್ಮ ವಿಚಾರಗಳನ್ನು ಮಂಡಿಸಿದರು.
ವೇದಿಕೆಯಲ್ಲಿ ಹರಿಹರ ನಾಯ್ಕ ತಂಡಾಗುಂಡಿ, ಶ್ರೀಧರ ಹೆಗಡೆ ಕೆರೆಮನೆ, ಎಮ್. ಆರ್. ನಾಯ್ಕ ಬೇಡ್ಕಣಿ ಉಪಸ್ಥಿತರಿದ್ದರು. ಪ್ರಮುಖರಾದ ಸುಧಾಕರ ಮಡಿವಾಳ ಬಿಳಗಿ, ಮಂಜು ಹುತ್ಗಾರ, ರಾಮಚಂದ್ರ ನಾಯ್ಕ ತ್ಯಾಗಲಿ ಮನೆ, ತಿಮ್ಮಪ್ಪ ನಾಯ್ಕ ವಾಟಗಾರ, ಅಬ್ದುಲ್ ಸುಭಾನ ಅರೆಂದೂರು, ಉಮೇಶ ನಾಯ್ಕ ತ್ಯಾಗಲಿ, ತಾರ್ತಿಸ್ ಫರ್ನಾಂಡಿಸ್, ಚೌಡು ಗೌಡ ಕಿತ್ತೋಳ್ಳಿ, ದಿನೇಶ ನಾಯ್ಕ ಹಾರ್ಸಿಕಟ್ಟ, ರಾಜು ನಾಯ್ಕ ಕಿರೆಕೋಡ, ಮಂಜುನಾಥ ಶಿವಾನಂದ ಹೆಮ್ಮನಬೈಲ್, ಭಾಸ್ಕರ್ ನಾಯ್ಕ ಕುರಗೇತೋಟ, ಮಂಜುನಾಥ ನಾಯ್ಕ ಬಿದ್ರಖಾನ, ರವಿ ನಾಯ್ಕ ಹಂಜಗಿ, ಮಂಜುನಾಥ ಮಡಿವಾಳ ಕಿಲಾರ ಸೇರಿದಂತೆ ನೂರಾರು ಪರಿಸರ ಪ್ರೇಮಿಗಳು ಹಾಗೂ ಹೋರಾಟಗಾರರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



