ಸಚಿವ ಯು.ಟಿ. ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ; ಗಂಭೀರ ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವರು

Jul 4, 2026 - 19:17
 0  207
ಸಚಿವ ಯು.ಟಿ. ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ; ಗಂಭೀರ ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವರು

ಆಪ್ತ ನ್ಯೂಸ್ ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ–66ರ ಬಾಳೆಗುಳಿ ಸಮೀಪದ ವರದರಾಜ್ ಹೋಟೆಲ್ ಬಳಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗಾಯಾಳುವನ್ನು ಅಲಗೇರಿ ಗ್ರಾಮದ ಸಂದೀಪ್ ನಾಯಕ ಎಂದು ಗುರುತಿಸಲಾಗಿದ್ದು, ಅಪಘಾತದ ತೀವ್ರತೆಗೆ ಅವರು ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ಮುಗಿಸಿದ ಬಳಿಕ ಸಚಿವ ಯು.ಟಿ. ಖಾದರ್ ರಸ್ತೆ ಮಾರ್ಗವಾಗಿ ಉಡುಪಿಯತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಸಚಿವರ ಕಾರಿನ ಮುಂಭಾಗದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಸಂದೀಪ್ ಚಲಾಯಿಸುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆದಿದೆ.

ಅಪಘಾತ ಕಂಡ ತಕ್ಷಣ ಮಾನವೀಯತೆ ಮೆರೆದ ಸಚಿವರು

ಅಪಘಾತ ತಮ್ಮ ಕಣ್ಣೆದುರೇ ಸಂಭವಿಸುತ್ತಿದ್ದಂತೆಯೇ ಸಚಿವ ಯು.ಟಿ. ಖಾದರ್ ತಕ್ಷಣವೇ ತಮ್ಮ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದು ಗಾಯಾಳುವಿನ ಬಳಿ ಧಾವಿಸಿದರು. ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಸಚಿವರು, ಯಾವುದೇ ವಿಳಂಬ ಮಾಡದೇ ಗಾಯಾಳುವನ್ನು ಅಂಕೋಲಾದ ಖಾಸಗಿ ಆರ್ಯ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲು ಅಗತ್ಯ ವ್ಯವಸ್ಥೆ ಮಾಡಿಸಿದರು.

ಸಚಿವರ ಸಮಯೋಚಿತ ಕ್ರಮದಿಂದ ಗಾಯಾಳುವಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕಿದ್ದು, ಸದ್ಯ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕ (ICU)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0