ಟಿಎಂಎಸ್‌ ಚುನಾವಣೆಯಲ್ಲಿ ಅಗ್ಗಾಶಿಕುಂಬ್ರಿ ತಂಡದ ಭರ್ಜರಿ ಗೆಲುವು: 14ರಲ್ಲಿ 12 ಸ್ಥಾನಗಳಲ್ಲಿ ದಿಗ್ವಿಜಯ

Jul 7, 2026 - 11:49
 0  140
ಟಿಎಂಎಸ್‌ ಚುನಾವಣೆಯಲ್ಲಿ ಅಗ್ಗಾಶಿಕುಂಬ್ರಿ ತಂಡದ ಭರ್ಜರಿ ಗೆಲುವು: 14ರಲ್ಲಿ 12 ಸ್ಥಾನಗಳಲ್ಲಿ  ದಿಗ್ವಿಜಯ

ಆಪ್ತ ನ್ಯೂಸ್ ಯಲ್ಲಾಪುರ:

ಕಳೆದ ವರ್ಷ ಸೆಪ್ಟೆಂಬರ್‌ 28ರಂದು ನಡೆದ ಟಿಎಂಎಸ್‌ ಆಡಳಿತ ಮಂಡಳಿ ಚುನಾವಣೆಯ ಮತ ಎಣಿಕೆ ಸೋಮವಾರ ಪೂರ್ಣಗೊಂಡು ಅಂತಿಮ ಫಲಿತಾಂಶ ಪ್ರಕಟವಾಗಿದೆ. ನ್ಯಾಯಾಲಯದ ವಿಚಾರಣೆ, ಮೇಲ್ಮನವಿ ಸೇರಿದಂತೆ ವಿವಿಧ ಕಾನೂನು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಸುಮಾರು ಒಂಬತ್ತು ತಿಂಗಳು ವಿಳಂಬವಾಗಿದ್ದ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದೆ.

ಅಗ್ಗಾಶಿಕುಂಬ್ರಿ ನಾರಾಯಣ ಭಟ್ಟ ಅವರ ನೇತೃತ್ವದ ತಂಡ ಹಾಗೂ ಬಟ್ಲಗುಂಡಿ ನಾರಾಯಣ ಭಟ್ಟ ಅವರ ತಂಡದ ನಡುವೆ ನಡೆದ ಪ್ರತಿಷ್ಠಿತ ಪೈಪೋಟಿಯಲ್ಲಿ ಅಗ್ಗಾಶಿಕುಂಬ್ರಿ ತಂಡ ಭರ್ಜರಿ ಜಯ ದಾಖಲಿಸಿದೆ. ಒಟ್ಟು 14 ನಿರ್ದೇಶಕ ಸ್ಥಾನಗಳ ಪೈಕಿ ಅಗ್ಗಾಶಿಕುಂಬ್ರಿ ತಂಡ 12 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ಬಟ್ಲಗುಂಡಿ ತಂಡ ಕೇವಲ 2 ಸ್ಥಾನಗಳಿಗೆ ಸೀಮಿತವಾಯಿತು.

ಚುನಾವಣೆಗೆ ಮುನ್ನವೇ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹನುಮಂತ ಕೊರವರ ಹಾಗೂ ಹಿಂದುಳಿದ ‘ಬಿ’ ವರ್ಗದ ಸ್ಥಾನದಿಂದ ರಾಜೇಂದ್ರ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 12 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಅಗ್ಗಾಶಿಕುಂಬ್ರಿ ತಂಡ 10 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿತು.

ಗೆದ್ದ ಅಭ್ಯರ್ಥಿಗಳ ಪಟ್ಟಿ

ಅಗ್ಗಾಶಿಕುಂಬ್ರಿ ತಂಡದಿಂದ ಆಯ್ಕೆಯಾದವರು:

  • ನರಸಿಂಹ ಕೋಣೆಮನೆ

  • ಮಂಜುನಾಥ ಮಹಾದೇವ ಹೆಗಡೆ (ಜಡ್ಡಿಗದ್ದೆ)

  • ಗಣಪತಿ ಹೆಗಡೆ (ಹಿತ್ತಳ್ಳಿ)

  • ಸುಬ್ಬಣ್ಣ ಬೋಳನೆ

  • ನಾರಾಯಣ ಭಟ್ಟ (ಅಗ್ಗಾಶಿಕುಂಬ್ರಿ)

  • ವೆಂಕಟರಮಣ ಭಟ್ಟ (ಕಿರಕುಂಭತ್ತಿ)

  • ಸೀತಾ ಮೆಣಸುಮನೆ

  • ಸೌಮ್ಯಾ ಕಿಚ್ಚುಪಾಲ

  • ಅಪ್ಪು ಆಚಾರಿ

  • ಸಾಲು ಸಿದ್ದಿ

ಬಟ್ಲಗುಂಡಿ ತಂಡದಿಂದ ಗೆದ್ದವರು:

  • ಗಣಪತಿ ಮುದ್ದೆಪಾಲ

  • ಆರ್.ಎನ್. ಹೆಗಡೆ (ಗೋರ್ಸಗದ್ದೆ)

ಈ ಚುನಾವಣೆಯ ಮತ್ತೊಂದು ಪ್ರಮುಖ ಅಂಶವೆಂದರೆ, ತಂಡದ ನೇತೃತ್ವ ವಹಿಸಿದ್ದ ಬಟ್ಲಗುಂಡಿ ನಾರಾಯಣ ಭಟ್ಟ ಅವರು ಸ್ವತಃ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಹಕಾರಿ ಇಲಾಖೆಯ ಸಹಾಯಕ ನಿಬಂಧಕ ಬಿ.ಡಿ. ಡಿಸೋಜಾ ಅವರ ನೇತೃತ್ವದಲ್ಲಿ ಐದು ಕೌಂಟರ್‌ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಗ್ಗಾಶಿಕುಂಬ್ರಿ ತಂಡದ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಒಟ್ಟಾರೆ, ಟಿಎಂಎಸ್‌ ಆಡಳಿತ ಮಂಡಳಿಯಲ್ಲಿ ಅಗ್ಗಾಶಿಕುಂಬ್ರಿ ತಂಡದ ಸಂಪೂರ್ಣ ಮೇಲುಗೈ ಸ್ಥಾಪನೆಯಾಗಿದ್ದು, ಮುಂದಿನ ಆಡಳಿತದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0