ಬನವಾಸಿ ಮಧುಕೇಶ್ವರ ದೇವಸ್ಥಾನದ ಸೋರಿಕೆ ತಡೆಗೆ ಇಲಾಖೆ ಮುಂದು: ಹೋರಾಟ ತಾತ್ಕಾಲಿಕ ವಾಪಸ್!

Mar 30, 2026 - 08:23
 0  57
ಬನವಾಸಿ ಮಧುಕೇಶ್ವರ ದೇವಸ್ಥಾನದ ಸೋರಿಕೆ ತಡೆಗೆ ಇಲಾಖೆ ಮುಂದು: ಹೋರಾಟ ತಾತ್ಕಾಲಿಕ ವಾಪಸ್!

ಆಪ್ತ ನ್ಯೂಸ್ ಬನವಾಸಿ:

ಐತಿಹಾಸಿಕ ಬನವಾಸಿಯ ಮಧುಕೇಶ್ವರ ದೇವಸ್ಥಾನದ ಮೇಲ್ಛಾವಣಿ ಸೋರಿಕೆ ತಡೆಗಟ್ಟಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ASI) ಅಂತಿಮವಾಗಿ ಮಣಿದಿದೆ. ಇಲಾಖೆಯ ಉನ್ನತ ಅಧಿಕಾರಿಗಳಿಂದ ಬಂದ ಲಿಖಿತ ಭರವಸೆ ಹಾಗೂ ದೂರವಾಣಿ ಕರೆ ಬೆನ್ನಲ್ಲೇ, ಮಾರ್ಚ್ 30ರ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಕೈಬಿಡಲು 'ಬನವಾಸಿ ನೂತನ ತಾಲೂಕು ರಚನೆ ಹೋರಾಟ ಸಮಿತಿ' ನಿರ್ಧರಿಸಿದೆ.

'ಗಾಡ್ ಪ್ರಾಮಿಸ್' ಅಂದ ಅಧಿಕಾರಿಗಳು!

ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಹಾವೇರಿ ಕಚೇರಿಯ ಕನ್ಸರ್ವೇಷನ್ ಅಸಿಸ್ಟೆಂಟ್ (ಸಿ.ಎ) ರಾಕೇಶ್ ಬಿ.ಎಸ್., ಹೋರಾಟ ಸಮಿತಿಯ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

"ದೇವರ ಸಾಕ್ಷಿಯಾಗಿ ಹೇಳುತ್ತೇವೆ, ದೇವಸ್ಥಾನದ ಶಾಶ್ವತ ದುರಸ್ತಿಗೆ ಸಂಬಂಧಿಸಿದ ಪ್ರಸ್ತಾವನೆ ದೆಹಲಿ ಕಚೇರಿಯಲ್ಲಿ ಅಂತಿಮ ಹಂತದಲ್ಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಜಾತ್ರೆ ಮುಗಿದ ತಕ್ಷಣವೇ ಕೆಲಸ ಆರಂಭಿಸುತ್ತೇವೆ" ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಪೊಲೀಸ್ ಇಲಾಖೆಯ ಮಧ್ಯಸ್ಥಿಕೆ ಮತ್ತು ಶ್ಲಾಘನೆ

ಪ್ರತಿಭಟನೆ ಹತ್ತಿಕ್ಕುವ ಬದಲು, ಸಮಸ್ಯೆಯ ಮೂಲವನ್ನು ಅರಿತು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ ಬನವಾಸಿ ಪಿಎಸ್ಐ ಮಹಾಂತೇಶ ಕಂಬಾರ ಅವರ ಕಾರ್ಯಕ್ಕೆ ಹೋರಾಟ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ. ಕಾರವಾರ ಎಸ್‌.ಪಿ ಹಾಗೂ ಶಿರಸಿ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಹಾವೇರಿ ಮತ್ತು ಧಾರವಾಡದ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ, ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಪ್ರಮುಖರ ಪ್ರತಿಕ್ರಿಯೆಗಳು

  • ಶಿವರಾಮ ಹೆಬ್ಬಾರ್ (ಶಾಸಕರು): "ನಿಮ್ಮ ಹೋರಾಟ ನ್ಯಾಯಯುತವಾಗಿದೆ, ಆದರೆ ಜಾತ್ರೆಯ ಸಮಯದಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದಿರಲಿ. ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದುವರಿಯಿರಿ" ಎಂದು ಕಿವಿಮಾತು ಹೇಳಿದ್ದರು.

  • ದೇವಸ್ಥಾನ ಸಮಿತಿ: "ನಮ್ಮ ಬೆಂಬಲ ಸದಾ ಹೋರಾಟಗಾರರ ಜೊತೆಗಿದೆ. ಜಾತ್ರೆಯ ಪಾವಿತ್ರ್ಯತೆ ಕಾಪಾಡಲು ಈಗ ಪ್ರತಿಭಟನೆ ಬೇಡ" ಎಂದು ಮನವಿ ಮಾಡಿದ್ದರು.

ಮುಂದಿನ ನಡೆ ಏನು?

ಸೋಮವಾರ ಸಾಯಂಕಾಲ ಅಧಿಕಾರಿ ರಾಕೇಶ್ ಅವರು ದಸ್ತಾವೇಜುಗಳೊಂದಿಗೆ ಬನವಾಸಿಗೆ ಆಗಮಿಸಿ ಸಮಿತಿಗೆ ಮನವರಿಕೆ ಮಾಡಲಿದ್ದಾರೆ. ಈ ಭೇಟಿಯ ನಂತರವಷ್ಟೇ ಹೋರಾಟ ಸಮಿತಿಯು ತನ್ನ ಮುಂದಿನ ನಿರ್ಣಯವನ್ನು ಕೈಗೊಳ್ಳಲಿದೆ.

ಈ ಯಶಸ್ಸಿಗೆ ಸಹಕರಿಸಿದ ಸಂಘ-ಸಂಸ್ಥೆಗಳು, ಭಕ್ತರು, ಮಾಧ್ಯಮ ಮಿತ್ರರು ಮತ್ತು ದೇವಸ್ಥಾನದ ಸಿಬ್ಬಂದಿ ಕಿರಣ್ ಭಟ್ ಅವರಿಗೆ ಸಮಿತಿಯ ಪದಾಧಿಕಾರಿಗಳಾದ ಉದಯಕುಮಾರ್ ಕಾನಳ್ಳಿ, ಸಿ.ಎಫ್. ನಾಯಕ ಮತ್ತು ವಿಶ್ವನಾಥ್ ವಡೆಯರ್ ಅಭಿನಂದನೆ ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0