ಆಪ್ತ ವಿಶೇಷ
ಲೇಖನ: ಆದಿತ್ಯ ನಾರಾಯಣ
****
ದಕ್ಷಿಣ ಕನ್ನಡ ಜಿಲ್ಲೆಯೆಂದರೆ ಶಿಕ್ಷಣ, ಬ್ಯಾಂಕಿಂಗ್ ಮತ್ತು ಉದ್ಯಮಗಳ ತವರೂರು ಎಂದು ಇಡೀ ದೇಶವೇ ಹೆಮ್ಮೆಪಡುತ್ತದೆ. ಆದರೆ ಇದೇ ಜಿಲ್ಲೆಯ ಒಂದು ಮೂಲೆಯಲ್ಲಿರುವ 'ಸುಳ್ಯ' ತಾಲೂಕು ಮಾತ್ರ ಇಂದಿಗೂ ಅಭಿವೃದ್ಧಿಯ ಮರೀಚಿಕೆಯಲ್ಲಿಯೇ ಇದೆ. ಇಂತಹ ಸಣ್ಣ ಊರಿನಿಂದ ಬೆಳೆದು, ಇಡೀ ದೇಶದ ಮೂಲೆ ಮೂಲೆಗಳಲ್ಲಿರುವ ಅದೆಷ್ಟೋ ಕುಗ್ರಾಮಗಳಿಗೆ ಉಕ್ಕಿನ ಹಗ್ಗಗಳ ಮೂಲಕ ಜೀವನಾಡಿ ಕಟ್ಟಿಕೊಟ್ಟ ಮಹಾನ್ ಸಾಧಕ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ಇಂದು ನಮ್ಮನ್ನಗಲಿದ್ದಾರೆ. ನದಿಗಳ ಎರಡು ದಡಗಳನ್ನು ಮಾತ್ರವಲ್ಲ, ಲಕ್ಷಾಂತರ ಜನರ ಹೃದಯಗಳನ್ನು ಬೆಸೆದ ಈ 'ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ' ಅವರ ಬದುಕು ಮತ್ತು ಸಾಧನೆ ಪ್ರತಿಯೊಬ್ಬ ಕನ್ನಡಿಗನೂ ಎದೆಯುಬ್ಬಿಸಿ ಹೇಳಿಕೊಳ್ಳುವಂತಹ ಹೆಮ್ಮೆಯ ಇತಿಹಾಸವಾಗಿದೆ.
ಸುಳ್ಯದ ರಾಜಕೀಯ ಇತಿಹಾಸವನ್ನು ಕೆದಕಿದರೆ, ಇದೇ ಮಣ್ಣಿನಿಂದ ಬಂದವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ, ಕೇಂದ್ರದಲ್ಲಿ ಇಬ್ಬರು ಸಚಿವರಾಗಿದ್ದಾರೆ, ಹಲವಾರು ಸಂಸದರು ಆಯ್ಕೆಯಾಗಿದ್ದಾರೆ. ಆದರೂ ಸುಳ್ಯ ತಾಲೂಕು ಮಾತ್ರ ಅಭಿವೃದ್ಧಿಯಲ್ಲಿ ಎಲ್ಲಿತ್ತೋ ಅಲ್ಲಿಯೇ ಇದೆ. ಇಡೀ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಒಂದೇ ಒಂದು ದೊಡ್ಡ ಕೈಗಾರಿಕೆ ಇಲ್ಲ, ಕೆವಿಜಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಬಿಟ್ಟರೆ ಬೇರೆ ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ, ಸರಿಯಾದ ಮೊಬೈಲ್ ನೆಟ್‌ವರ್ಕ್ ಕೂಡ ಇಲ್ಲದ ಹಿಂದುಳಿದ ಪ್ರದೇಶವಿದು. ಇಂತಹ ವ್ಯವಸ್ಥೆಯ ನಡುವೆ, ಯಾವುದೇ ಅಬ್ಬರವಿಲ್ಲದೆ ಸುಳ್ಯದಲ್ಲಿ 'ಆಯಶಿಲ್ಪ' ಎಂಬ ಸಣ್ಣ ಗ್ಯಾರೇಜ್ ಆರಂಭಿಸಿ, ತಮ್ಮ ಕಠಿಣ ಪರಿಶ್ರಮ ಮತ್ತು ಕಾಯಕದ ಮೂಲಕವೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಅಪ್ಪಟ ದೇಶಪ್ರೇಮಿ ಗಿರೀಶ್ ಭಾರದ್ವಾಜ್.
ಸುಳ್ಯದ ಅರಂತೋಡು ಸಮೀಪದ ಅರಂಬೂರು ಭಾಗದಲ್ಲಿ ಹರಿಯುವ ಪಯಸ್ವಿನಿ ನದಿಯನ್ನು ದಾಟಲು ಮಳೆಗಾಲದಲ್ಲಿ ಜನ ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ. ಸೇತುವೆಗಾಗಿ ಸರ್ಕಾರದ ಕದತಟ್ಟಿ ಸುಸ್ತಾಗಿದ್ದ ಆ ಜನರಿಗೆ ಗಿರೀಶ್ ಭಾರದ್ವಾಜ್ ಆಶಾಕಿರಣವಾದರು. ಅತ್ಯಂತ ಕಡಿಮೆ ಖರ್ಚಿನಲ್ಲಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಪಯಸ್ವಿನಿ ನದಿಗೆ ಮೊದಲ ತೂಗುಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸುವ ಮೂಲಕ ಒಂದು ಹೊಸ ಕ್ರಾಂತಿಗೆ ನಾಂದಿ ಹಾಡಿದರು. ಸರ್ಕಾರದ ಕಾಂಕ್ರೀಟ್ ಸೇತುವೆಗಳಿಗೆ ಕೋಟ್ಯಂತರ ರೂಪಾಯಿ ಮತ್ತು ವರ್ಷಗಳೇ ಬೇಕಾದರೆ, ಇವರ ತೂಗುಸೇತುವೆಗಳು ಅತ್ಯಂತ ಕಡಿಮೆ ತೂಕ ಹೊಂದಿದ್ದು, ಕೇವಲ ಕೆಲವೇ ತಿಂಗಳುಗಳಲ್ಲಿ ನಿರ್ಮಾಣವಾಗುತ್ತಿದ್ದವು. ನದಿಯ ಸಹಜ ಹರಿವಿಗೆ ಯಾವುದೇ ಧಕ್ಕೆ ಬಾರದಂತೆ ನಿರ್ಮಾಣವಾಗುತ್ತಿದ್ದ ಈ ಸೇತುವೆಗಳು, ಹಳ್ಳಿಗರು ನಡೆದುಕೊಂಡು ಹೋಗಲು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅತ್ಯಂತ ಪರಿಣಾಮಕಾರಿಯಾಗಿದ್ದವು.
ಗಿರೀಶ್ ಅವರ ಈ ಸಾಧನೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಲಿಲ್ಲ. ನೆರೆಯ ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾ ರಾಜ್ಯಗಳ ದಟ್ಟ ಅರಣ್ಯ ಮತ್ತು ನಡುಗಡ್ಡೆಗಳಿಗೂ ಇವರು 140ಕ್ಕೂ ಹೆಚ್ಚು ಸೇತುವೆಗಳನ್ನು ನಿರ್ಮಿಸಿದ್ದಾರೆ. ಎಲ್ಲಕ್ಕಿಂತ ಹೆಮ್ಮೆಯ ವಿಚಾರವೆಂದರೆ, ನಕ್ಸಲ್ ಬಾಧಿತ ದಟ್ಟ ಕಾಡುಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಕಾಲಿಡಲು ಹಿಂದೇಟು ಹಾಕುತ್ತಿದ್ದಾಗ, ಅಲ್ಲಿನ ಮುಗ್ಧ ಜನರಿಗಾಗಿ ಜೀವದ ಹಂಗುತೊರೆದು ನಿಂತು ತೂಗುಸೇತುವೆಗಳನ್ನು ನಿರ್ಮಿಸಿಕೊಟ್ಟ ಅಪ್ರತಿಮ ಧೀರ ಇವರು. ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ನಕ್ಸಲರ ಗುಂಡಿನ ಸದ್ದಿನ ನಡುವೆ ಬದುಕುತ್ತಿದ್ದ ನೂರಾರು ಹಳ್ಳಿಗಳಿಗೆ ಇವರು ಕಟ್ಟಿಕೊಟ್ಟ ತೂಗುಸೇತುವೆಗಳು ಅಭಿವೃದ್ಧಿಯ ಹೊಸ ಹೆದ್ದಾರಿಯನ್ನೇ ಸೃಷ್ಟಿಸಿದವು. ಗಿರೀಶ್ ಅವರ ಈ ಛಲದ ಮುಂದೆ ನಕ್ಸಲರ ಬೆದರಿಕೆಗಳೂ ಮಂಡಿಯೂರಿ ಕೂತಿದ್ದವು.
ಇವರ ಈ ತೂಗುಸೇತುವೆಗಳು ಕೇವಲ ಸಂಪರ್ಕ ಕೊಂಡಿಗಳಷ್ಟೇ ಅಲ್ಲ, ಅತ್ಯದ್ಭುತ ಪ್ರವಾಸಿ ತಾಣಗಳೂ ಹೌದು. ನನ್ನ ಮನೆ ಪಕ್ಕದಲ್ಲಿರುವ ಕರ್ನಾಟಕ-ಕೇರಳ ಗಡಿಭಾಗದ ರಸ್ತೆ ಬದಿಯಲ್ಲಿರುವ ಸೇತುವೆಗಳು ಸದಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಊರವರು ಸಂಜೆ ಹೊತ್ತು ಸೇತುವೆ ಬಳಿ ಲೋಕಾಭಿರಾಮವಾಗಿ ಮಾತನಾಡುತ್ತಾ ನಿಲ್ಲುವ ದೃಶ್ಯ ಆ ಊರಿನ ಸೌಂದರ್ಯವನ್ನು ಹೆಚ್ಚಿಸಿದೆ. ಆದರೆ, ಇತ್ತೀಚೆಗೆ ಕೆಲವು ಯುವಕರು ತೋರುತ್ತಿರುವ ವರ್ತನೆ ಬೇಸರ ತರಿಸುವಂತಿದೆ. ಕಾಲೇಜಿನ ಕೆಲವು ಪರವೂರು ವಿದ್ಯಾರ್ಥಿಗಳು ೮-೧೦ ಬೈಕ್‌ಗಳಲ್ಲಿ ಡಬಲ್ ರೈಡಿಂಗ್ ಮಾಡಿಕೊಂಡು, ಅತಿವೇಗವಾಗಿ ಚಪ್ರಿಗಳಂತೆ ಈ ಸೇತುವೆಗಳ ಮೇಲೆ ವಾಹನ ಚಲಾಯಿಸುವ ದೃಶ್ಯಗಳು ಸಾಮಾನ್ಯವಾಗಿವೆ. ಇದನ್ನು ನೋಡುವ ಸ್ಥಳೀಯರು, "ಈ ಹುಡುಗರು ಈ ಸೇತುವೆಯನ್ನು ಉಳಿಯಲು ಬಿಡುತ್ತಾರಾ?" ಎಂದು ಆತಂಕ ವ್ಯಕ್ತಪಡಿಸುವುದು ಕಟು ವಾಸ್ತವ. ಜೀವದ ಹಂಗು ತೊರೆದು ಗಿರೀಶ್ ಅವರು ಕಟ್ಟಿಕೊಟ್ಟ ಇಂತಹ ಅಪೂರ್ವ ಆಸ್ತಿಗಳನ್ನು ಉಳಿಸಿಕೊಳ್ಳುವ ಕನಿಷ್ಠ ಕಾಳಜಿಯೂ ಇಂದಿನ ಪೀಳಿಗೆಗೆ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸ.
ಯಾವುದೇ ಲಾಭದ ನಿರೀಕ್ಷೆಯಿಲ್ಲದೆ, ಕೇವಲ ಸಮಾಜಮುಖಿ ಕಳಕಳಿಯಿಂದ ದಶಕಗಳ ಕಾಲ ಸೇವೆ ಸಲ್ಲಿಸಿದ ಗಿರೀಶ್ ಭಾರದ್ವಾಜ್ ಅವರ ಈ ನಿಸ್ವಾರ್ಥ ಕಾಯಕವನ್ನು ಇಡೀ ಜಗತ್ತು ಗುರುತಿಸಿದೆ. ಖ್ಯಾತ ಬಜಾಜ್ ಕಂಪನಿಯು ಇವರ ಸಾಧನೆಯ ಕುರಿತು ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿ ದೇಶಕ್ಕೆ ಪರಿಚಯಿಸಿದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಶ್ರೀ' ನೀಡಿ ಗೌರವಿಸಿತು. ರಾಜಕಾರಣಿಗಳು ಮರೆತ ಸುಳ್ಯವನ್ನು ತಮ್ಮ ಉಕ್ಕಿನ ಹಗ್ಗಗಳ ಮೂಲಕ ದೇಶದ ಭೂಪಟದಲ್ಲಿ ಬೆಳಗಿಸಿದ ಗಿರೀಶ್ ಭಾರದ್ವಾಜ್ ಭೌತಿಕವಾಗಿ ನಮ್ಮೊಂದಿಗಿಲ್ಲದಿರಬಹುದು. ಆದರೆ, ಅವರು ಕಟ್ಟಿದ ಆ ನೂರಾರು ತೂಗುಸೇತುವೆಗಳ ಮೇಲೆ ಪ್ರತಿದಿನ ನಗುನಗುತ್ತಾ ಹೆಜ್ಜೆ ಹಾಕುವ ಲಕ್ಷಾಂತರ ಮುಗ್ಧ ಜನರ ಪ್ರಾರ್ಥನೆಯಲ್ಲಿ ಅವರು ಸದಾ ಅಜರಾಮರ. ಆ ಹೆಮ್ಮೆಯ ಚೇತನಕ್ಕೆ ಸಾಷ್ಟಾಂಗ ನಮನಗಳು.