ಭವ್ಯ ಮಂದಿರ ಕಟ್ಟಿದ ಕೈಗಳಿಗೆ 'ಹುಂಡಿ' ಜೋಪಾನ ಮಾಡಲು ಆಗಲಿಲ್ಲವೇ? ಡಿಜಿಟಲ್ ಇಂಡಿಯಾದಲ್ಲಿ ರಾಮನ ಲೆಕ್ಕಾಚಾರಕ್ಕೇಕೆ ಇಷ್ಟು ನಿರ್ಲಕ್ಷ್ಯ?

Jul 7, 2026 - 08:27
 0  78
ಭವ್ಯ ಮಂದಿರ ಕಟ್ಟಿದ ಕೈಗಳಿಗೆ 'ಹುಂಡಿ' ಜೋಪಾನ ಮಾಡಲು ಆಗಲಿಲ್ಲವೇ? ಡಿಜಿಟಲ್ ಇಂಡಿಯಾದಲ್ಲಿ ರಾಮನ ಲೆಕ್ಕಾಚಾರಕ್ಕೇಕೆ ಇಷ್ಟು ನಿರ್ಲಕ್ಷ್ಯ?
ಲೇಖನ: ಆದಿತ್ಯ ನಾರಾಯಣ್

***

ಐದು ನೂರು ವರ್ಷಗಳ ಸುದೀರ್ಘ ಹೋರಾಟ, ಕೋಟ್ಯಂತರ ಹಿಂದೂಗಳ ತ್ಯಾಗ ಮತ್ತು ಬಲಿದಾನದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆಎತ್ತಿ ನಿಂತಿದೆ. ಆದರೆ, ಇಷ್ಟು ದೊಡ್ಡ ಭವ್ಯ ಮಂದಿರ ಕಟ್ಟಿದ ಟ್ರಸ್ಟ್ ಮತ್ತು ಆಡಳಿತ ಮಂಡಳಿಗೆ, ಭಕ್ತರು ಭಕ್ತಿಯಿಂದ ನೀಡಿದ 'ಹುಂಡಿ'ಯನ್ನು ಜೋಪಾನ ಮಾಡಲು, ಲೆಕ್ಕಾಚಾರವಿಡಲು ಆಗಲಿಲ್ಲವೇ? ಎಂಬ ಆಕ್ರೋಶದ ಪ್ರಶ್ನೆ ಈಗ ಪ್ರತಿಯೊಬ್ಬ ರಾಮಭಕ್ತನನ್ನೂ ಕಾಡಲಾರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಹೋದಲೆಲ್ಲಾ 'ಡಿಜಿಟಲ್ ಇಂಡಿಯಾ' ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಇಂದು ಬೀದಿ ಬದಿಯ ಟೀ ಅಂಗಡಿಯಿಂದ ಹಿಡಿದು ತರಕಾರಿ ಗಾಡಿಯವರೆಗೂ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿ ನಡೆಯುತ್ತಿದೆ. ಹೀಗಿರುವಾಗ, ರಾಮಮಂದಿರದಂತಹ ಜಾಗತಿಕ ಮಟ್ಟದ, ಕೋಟ್ಯಂತರ ರೂಪಾಯಿ ಹರಿದುಬರುವ ದೇವಾಲಯದಲ್ಲಿ ದೇಣಿಗೆ ಪಡೆಯುವಾಗ ಮೊದಲ ದಿನದಿಂದಲೇ ಕಡ್ಡಾಯವಾಗಿ 'ಡಿಜಿಟಲ್ ರಶೀದಿ' ವ್ಯವಸ್ಥೆಯನ್ನು ಏಕೆ ಜಾರಿಗೆ ತರಲಿಲ್ಲ? ಹಣ ಕಲೆಕ್ಷನ್ ಮತ್ತು ದಾನ-ದತ್ತಿಗಳ ರೆಕಾರ್ಡ್ ಮೇಂಟೇನ್ ಮಾಡುವಲ್ಲಿ ಆಡಳಿತ ಮಂಡಳಿ ಮಾಡಿದ ಎಡವಟ್ಟುಗಳು ನಿಜಕ್ಕೂ ಅಕ್ಷಮ್ಯ. ಪಕ್ಕಾ ಕಾರ್ಪೊರೇಟ್ ಶೈಲಿಯಲ್ಲಿ ಹೈಟೆಕ್ ಆಡಿಟಿಂಗ್ ವ್ಯವಸ್ಥೆ ಇಲ್ಲದಿರುವುದೇ ಇಂದು ಇಷ್ಟೆಲ್ಲಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಿರೋಧಿಗಳ ಕಣ್ಣು ಕುಕ್ಕುವಾಗ ಶಿಸ್ತು ಬೇಡ್ವಾ?
ರಾಮಮಂದಿರದ ಕಲ್ಪನೆಯೇ ಮೊದಲಿನಿಂದಲೂ ವಿರೋಧಿಗಳ ಪಾಲಿಗೆ ಕಣ್ಣಿನ ಕಸ. ಮಂದಿರ ನಿರ್ಮಾಣದ ಹಂತದಿಂದಲೇ ಎಲ್ಲಿ ಸಣ್ಣ ತಪ್ಪು ನಡೆಯುತ್ತದೆ, ಅದನ್ನು ರಾಷ್ಟ್ರೀಯ ಮಟ್ಟದಲ್ಲಿ ಹೇಗೆ ವಿವಾದ ಮಾಡಬಹುದು ಎಂದು ಕ್ಯಾಮೆರಾ ಹಿಡಿದು ಕಾಯುತ್ತಿದ್ದ ದೊಡ್ಡ ಪಡೆಯೇ ಈ ದೇಶದಲ್ಲಿದೆ. ಈ ಸತ್ಯ ಗೊತ್ತಿದ್ದೂ, ಟ್ರಸ್ಟ್ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿ ಹುಂಡಿ ಮತ್ತು ದೇಣಿಗೆ ವಿಚಾರದಲ್ಲಿ ಎಷ್ಟೊಂದು ಜಾಗರೂಕವಾಗಿ, ಮಿಲಿಟರಿ ಶಿಸ್ತಿನಲ್ಲಿ ಇರಬೇಕಿತ್ತು? ಆದರೆ ಆಡಳಿತ ಮಂಡಳಿಯ ಗುರಿ ಕೇವಲ 'ಮಂದಿರ ನಿರ್ಮಾಣ'ಕ್ಕಷ್ಟೇ ಸೀಮಿತವಾದಂತಿತ್ತು. ಒಮ್ಮೆ ಮಂದಿರ ನಿರ್ಮಾಣವಾಗಿ, ಪ್ರಾಣಪ್ರತಿಷ್ಠೆ ಮುಗಿದ ಕೂಡಲೇ ವ್ಯವಸ್ಥೆಯನ್ನು ಸ್ವಲ್ಪ 'ಲೂಸ್' ಬಿಟ್ಟಿದ್ದೇ ಇಂದಿನ ಈ ರಾದ್ಧಾಂತಕ್ಕೆ, ವಿರೋಧಿಗಳ ಟೀಕೆಗೆ ಕಾರಣವಾಗಿದೆ.

ಬಾಂಗ್ಲಾ ವಿಮೋಚನೆಯ ಇತಿಹಾಸದಿಂದ ಪಾಠ ಕಲಿಯಲಿಲ್ಲವೇ?
ಒಂದು ಬೃಹತ್ ಕಾರ್ಯಾಚರಣೆ ಮುಗಿದ ತಕ್ಷಣ ವ್ಯವಸ್ಥೆಯನ್ನು ಸಡಿಲ ಬಿಟ್ಟರೆ ಏನಾಗುತ್ತದೆ ಎಂಬುದಕ್ಕೆ 1971ರ 'ಬಾಂಗ್ಲಾ ವಿಮೋಚನೆ'ಯೇ ನಮ್ಮ ಕಣ್ಣ ಮುಂದಿರುವ ಬಹುದೊಡ್ಡ ಉದಾಹರಣೆ. ಅಂದು ಪಾಕಿಸ್ತಾನವನ್ನು ಸೀಳಿ, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ ಭಾರತ, ಅದನ್ನು ತಕ್ಷಣವೇ ಅಲ್ಲಿನ ನಾಯಕರಿಗೆ ಬಿಟ್ಟುಕೊಟ್ಟು ಕೈತೊಳೆದುಕೊಂಡಿತು. ಅದರ ಪರಿಣಾಮವಾಗಿ ಇಂದು ಅಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದೆ, ನಾವೇ ತಲೆನೋವು ಅನುಭವಿಸುತ್ತಿದ್ದೇವೆ. ವಾಸ್ತವದಲ್ಲಿ, ಬಾಂಗ್ಲಾವನ್ನು ಕನಿಷ್ಠ 5-10 ವರ್ಷಗಳ ಕಾಲವಾದರೂ ನಮ್ಮ ಸೇನೆಯ ಅಥವಾ ಸರ್ಕಾರದ ನೇರ ನಿಯಂತ್ರಣದಲ್ಲಿಟ್ಟು, ಅಲ್ಲಿನ ಆಡಳಿತ, ಭದ್ರತಾ ವ್ಯವಸ್ಥೆಯನ್ನು ಒಂದು ಹಳಿಗೆ ತಂದು, ಪಕ್ಕಾ ಸಿಸ್ಟಮ್ ರೂಪಿಸಿದ ಬಳಿಕವಷ್ಟೇ ಹಸ್ತಾಂತರಿಸಬೇಕಿತ್ತು.
ರಾಮಮಂದಿರದ ವಿಚಾರದಲ್ಲೂ ಆಗಿದ್ದೇ ಇದು. ಮಂದಿರ ಉದ್ಘಾಟನೆ ಆಯ್ತು, ನಮ್ಮ ಕೆಲಸ ಮುಗೀತು ಎಂದು ನಿರ್ವಹಣಾ ವ್ಯವಸ್ಥೆಯನ್ನು ಲಘುವಾಗಿ ಪರಿಗಣಿಸಲಾಯಿತು. ಭವ್ಯ ಕಟ್ಟಡ ಕಟ್ಟಿದರಷ್ಟೇ ಸಾಲದು, ಅದರೊಳಗಿನ ಆಡಳಿತಾತ್ಮಕ ಸಿಸ್ಟಮ್ ಅನ್ನು ಕಲ್ಲಿನಷ್ಟೇ ಗಟ್ಟಿಯಾಗಿ ಕಟ್ಟಬೇಕಿತ್ತು. ಅಲ್ಲಿಯೂ ಆಡಳಿತ ಮಂಡಳಿ ಎಡವಿದೆ.

ಡೈಲಿ ಅಪ್‌ಡೇಟ್ ನಿಲ್ಲಿಸಿದ್ದೇಕೆ?
ಮಂದಿರ ನಿರ್ಮಾಣದ ಸಮಯದಲ್ಲಿ ಪ್ರತಿದಿನದ ಅಪ್‌ಡೇಟ್‌ಗಳು, ಫೋಟೋಗಳು, ಕೆಲಸದ ಪ್ರಗತಿ ಎಲ್ಲವೂ ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಸಿಗುತ್ತಿದ್ದವು. ಇದರಿಂದ ಭಕ್ತರಿಗೂ ಒಂದು ಭಾವನಾತ್ಮಕ ಕನೆಕ್ಟ್ ಇತ್ತು. ಆದರೆ ಉದ್ಘಾಟನೆಯಾದ ಬಳಿಕ ಆ ಡೈಲಿ ಅಪ್‌ಡೇಟ್ಸ್ ನಿಲ್ಲಿಸಿದ್ದು ಮತ್ತೊಂದು ದೊಡ್ಡ ತಪ್ಪು. ಭಕ್ತರಿಗೆ ಮಾಹಿತಿಯ ಕೊರತೆಯಾದಾಗಲೇ ವದಂತಿಗಳು, ಅಪಪ್ರಚಾರಗಳು ಹುಟ್ಟಿಕೊಳ್ಳುವುದು. ಈಗಲೂ ಕಾಲ ಮಿಂಚಿಲ್ಲ. ಗುಡಿ ಕಟ್ಟುವಾಗ ತೋರಿದ ಶ್ರದ್ಧೆಯನ್ನು, ಈಗ ಲೆಕ್ಕ ಇಡುವಾಗಲೂ ತೋರಬೇಕಿದೆ. ಹುಂಡಿ ಮತ್ತು ದೇಣಿಗೆಯ ಪ್ರತಿ ಪೈಸೆಗೂ ಪಕ್ಕಾ ಡಿಜಿಟಲ್ ಲೆಕ್ಕಾಚಾರ, ಹೈಟೆಕ್ ಆಡಿಟಿಂಗ್ ಮತ್ತು ಭಕ್ತರಿಗೆ ಪ್ರತಿದಿನದ ಮಾಹಿತಿ ನೀಡುವ ಪಾರದರ್ಶಕ ವ್ಯವಸ್ಥೆ ತಕ್ಷಣವೇ ಜಾರಿಯಾಗಬೇಕು. ಇಲ್ಲದಿದ್ದರೆ, ಸದಾ ಕಾದು ಕುಳಿತಿರುವ ವಿರೋಧಿಗಳ ಬಾಯಿಗೆ ನಾವೇ ಆಹಾರವಾದಂತೆ.

ಭಕ್ತಿ ಇರಲಿ, ಅದರೆ ಆಡಳಿತದಲ್ಲಿ ಲೆಕ್ಕ ಪಕ್ಕಾ ಇರಲಿ!

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0